

ಚಿಕ್ಕಮಗಳೂರು: ದಲಿತರು ಮತ್ತು ಶೋಷಿತರು ತಮ್ಮ ಹಕ್ಕುಗಳನ್ನು ಪಡೆಯಲು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗಬೇಕು ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.
ಡಾ. ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಬಿಎಸ್ಪಿ ನಗರ ಘಟಕ ಭಾನುವಾರ ಏರ್ಪಡಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು.
ದೇಶದ ಅಲ್ಪಸಂಖ್ಯಾತರಾದ ಬಹುತೇಕ ಎಲ್ಲ ಮೇಲ್ವರ್ಗದವರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಂಬೇಡ್ಕರ್ ದಾರಿ ಅನುಸರಿಸದ ಕಾರಣ ಬಹುಸಂಖ್ಯಾತರಾದ ಕೆಳವರ್ಗದ ಜನ ಸಂಕಷ್ಟದಲ್ಲಿದ್ದಾರೆ. ಹೊಟ್ಟೆ, ಬಟ್ಟೆಗಿಲ್ಲದೆ ಮಕ್ಕಳಿಗೆ ಶಿಕ್ಷಣ ಕೊಡಿಸಲು ಕೂಡ ಹಣವಿಲ್ಲದೆ ಹೈರಾಣಾಗಿದ್ದಾರೆ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ತಾಲೂಕು ಅಧ್ಯಕ್ಷ ಹರೀಶ್ ಮಿತ್ರ, ಕಚೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ವಕೀಲ ರಮೇಶ್, ನಗರಾಧ್ಯಕ್ಷ ಹನುಮಂತರಾಯ, ಕಾರ್ಯದರ್ಶಿ ವಿನೀತ್, ಕ್ಷೇತ್ರ ಸಮಿತಿ ಕಾರ್ಯದರ್ಶಿ ವಸಂತ, ಲಕ್ಷ್ಮಣ್ ಇದ್ದರು.
ಈಡೇರಿಲ್ಲ ಸಂವಿಧಾನದ ಆಶಯ: ಸರ್ವರಿಗೂ ಸಮಪಾಲು-ಸಮಬಾಳು, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿ ಸಂವಿಧಾನದ ಆಶಯದಂತೆ ಇಂದಿನವರೆಗೂ ನಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಬೇಸರ ವ್ಯಕ್ತಪಡಿಸಿದರು. ಜಿಪಂ ಆವರಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಡಾ. ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು. ಅಸ್ಪೃಶ್ಯತೆ ತೊಲಗಿಸಬೇಕೆಂದು ಧ್ವನಿ ಎತ್ತಿದ್ದಾರೆ. ಅಂಬೇಡ್ಕರ್ ಬರೆದ ಲೇಖನ ಓದಿ ರಾಷ್ಟ್ರದಲ್ಲಿ ಜಾತಿ ವ್ಯವಸ್ಥೆಗೆ ತಿಲಾಂಜಲಿ ಇಟ್ಟ ದಿನ ನಾಡಿಗೆ ಒಳಿತಾಗುತ್ತದೆ ಎಂದು ಮಹಾತ್ಮ ಗಾಂಧಿ 1933ರಲ್ಲೇ ಹೇಳಿದ್ದರು. ಸಂವಿಧಾನದ ಆಶಯದಂತೆ ಕೆಲಸ ಮಾಡಿದ ಸಂದರ್ಭ ಮಾತ್ರ ಇಂತಹ ಸಂಸ್ಮರಣೆ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ. ಎಲ್ಲ ಪಕ್ಷಗಳೂ ಅವರನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದು ಸಂವಿಧಾನ ಕೊಟ್ಟ ಮಹಾಶಿಲ್ಪಿಗೆ ಗೌರವ ನೀಡಬೇಕಾದುದು ಧರ್ಮ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಚರ್ಚೆ ಅಗತ್ಯವಾಗಿದ್ದು ಅಂಬೇಡ್ಕರ್ ನಡೆ, ನುಡಿ, ತತ್ವ, ಸಿದ್ಧಾಂತಗಳನ್ನು ಪಾಲಿಸುವತ್ತ ಸಾಗೋಣ ಎಂದರು.