

ಮಂಡ್ಯ: ಮರಿತಿಬ್ಬೇಗೌಡ ಅವರು ಮೊದಲ ಬಾರಿಗೆ ಎಂಎಲ್‌ಸಿ ಆದಾಗ ಪ್ರಥಮ ದರ್ಜೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಶೇ.70ರಷ್ಟು ಖಾಯಂ ಬೋಧಕರಿದ್ದರು. ಈಗ ಕೇವಲ ಶೇ.30 ರಿಂದ 35ರಷ್ಟು ಮಾತ್ರ ಖಾಯಂ ಬೋಧಕರಿದ್ದಾರೆ. ಇದರ ಹೊಣೆಯನ್ನು ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿದ್ದವರು ಹೊರಬೇಕು. ಅದರಂತೆ ಕಳೆದ 24 ವರ್ಷದಿಂದ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮರಿತಿಬ್ಬೆಗೌಡ ಅವರನ್ನು ಸೋಲಿಸಬೇಕೆಂದು ಬಿಎಸ್ಪಿ ರಾಜ್ಯ ಸಂಯೋಜಕ ಮತ್ತು ಉಸ್ತುವಾರಿ ಎಂ.ಕೃಷ್ಣಮೂರ್ತಿ ಮನವಿ ಮಾಡಿದರು.
ಶೇ.70ರಷ್ಟು ಅತಿಥಿ ಪ್ರಾಧ್ಯಾಪಕರಿಂದ ಪ್ರಥಮ ದರ್ಜೆ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳು ನಡೆಯುತ್ತಿವೆ. ಇವರನ್ನು ಖಾಯಂ ಮಾಡಿಸಲು ಮರಿತಿಬ್ಬೇಗೌಡ ವಿಫಲರಾಗಿದ್ದಾರೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ 1 ಲಕ್ಷದ 40 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಿಸುವಲ್ಲಿಯೂ ನಿರ್ಲಕ್ಷೃ ತೋರಿದ್ದಾರೆ. ಅನುದಾನಿತ ಶಾಲಾ ಕಾಲೇಜುಗಳ ಶಿಕ್ಷಕರು ತಮಗೆ ವಿಮೆ, ಆರೋಗ್ಯ ಮತ್ತು ಮಾಸಾಶನ ಸೌಲಭ್ಯ ನೀಡಬೇಕೆಂದು ಕಳೆದ 20 ವರ್ಷದಿಂದ ಹೋರಾಡುತ್ತಿದ್ದಾರೆ. ಇವರ ಬೇಡಿಕೆಯನ್ನು ಈಡೇರಿಸಲಿಲ್ಲ. ಮಾತ್ರವಲ್ಲದೆ 1995 ರಿಂದ ಕನ್ನಡ ಶಾಲಾ ಕಾಲೇಜುಗೆ ಅನುದಾನ ಕೊಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಾ ಪ್ರಹಾರ ನಡೆಸಿದರು.
ಇನ್ನು ಬಿಜೆಪಿ ಬೆಂಬಲಿತ ಜೆಡಿಎಸ್‌ಅಭ್ಯರ್ಥಿ ವಿವೇಕಾನಂದ ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡಲು ಸಹ ಅರ್ಹರಲ್ಲ. ಚಿಂತಕರ ಮತ್ತು ಬುದ್ಧಿವಂತರ ಚಾವಡಿಯಾಗಿರುವ ವಿಧಾನ ಪರಿಷತ್‌ಗೆ ಶಿಕ್ಷಕರ ಹಾಗೂ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಯಾವುದೇ ಜ್ಞಾನ ಇಲ್ಲದ, ಕೇವಲ ಎಸ್‌ಎಸ್‌ಎಲ್ಸಿ ಓದಿರುವ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸುವ ಮೂಲಕ ಶಿಕ್ಷಕ ವೃಂದಕ್ಕೆ ಅಪಮಾನ ಮಾಡಿವೆ. ಕೇವಲ ಹಣಕಾಸಿನ ಮಾನದಂಡವನ್ನು ಇಟ್ಟುಕೊಂಡು ಕುರಿ ಕೋಳಿ ತರಕಾರಿಗಳನ್ನು ಖರೀದಿ ಮಾಡುವಂತೆ, ಶಿಕ್ಷಕ ಮತದಾರರನ್ನು ಖರೀದಿ ಮಾಡಲು ಚುನಾವಣೆಗೆ ಇಳಿಸಿದಂತಿದೆ. ವಿಶ್ವವಿದ್ಯಾನಿಲಯಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸೆಮಿನಾರ್‌ಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸುವ ಜ್ಞಾನಿಗಳ ಕ್ಷೇತ್ರಕ್ಕೆ ದುಡ್ಡಿನ ಕುಳವನ್ನು ಕಣಕ್ಕಿಳಿಸುವ ಮೂಲಕ ಇಡೀ ಶಿಕ್ಷಕ ವೃಂದವನ್ನು ಅಣಕಿಸುವಂತೆ ಮಾಡಲಾಗಿದೆ ಎಂದು ಆರೋಪಿಸಿದರು.
ರಾಜ್ಯದ ಶಿಕ್ಷಕರ ಕ್ಷೇತ್ರದಲ್ಲಿ ಒಬ್ಬನೇ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಿಂದ ಟಿಕೆಟ್ ನೀಡದೆ ಅಸ್ಪೃಶ್ಯತೆ ಆಚರಿಸುತ್ತಿವೆ. ಶೇ.30 ರಿಂದ 40ರಷ್ಟಿರುವ ಎಸ್ಸಿ, ಎಸ್ಟಿ ಶಿಕ್ಷಕ ಮತದಾರರು ಮೂರು ಪಕ್ಷಗಳಿಗೆ ಬುದ್ಧಿ ಕಲಿಸಲು ಇದು ಸಕಾಲ. ಬಿಎಸ್ಪಿ ಬೆಂಬಲಿತ ಹ.ರಾ.ಮಹೇಶ್ ಅವರನ್ನು ಗೆಲ್ಲಿಸಿದರೆ ಪ್ರಥಮ ದರ್ಜೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಬೋಧಿಸುತ್ತಿರುವ ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರನ್ನು ಖಾಯಂಗಳಿಸಲು ಹೋರಾಡುತ್ತಾರೆ. ಅನುದಾನಿತ ಶಾಲಾ ಕಾಲೇಜುಗಳ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಸದನದಲ್ಲಿ ಚರ್ಚಿಸುತ್ತಾರೆ. ಕಳೆದ 22 ವರ್ಷಗಳಿಂದ ಶಿಕ್ಷಕರಾಗಿ ಬೋಧಿಸುತ್ತಿರುವ ಹಾಗೂ ಹೋರಾಟಗಾರ ಹ.ರಾ.ಮಹೇಶ್ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎಂ.ಎಸ್.ವೆಂಕಟೇಶ್, ಜಿಲ್ಲಾಧ್ಯಕ್ಷ ಶಿವಶಂಕರ್, ನಂಜುಂಡಸ್ವಾಮಿ, ದಿನೇಶ್, ಯೋಗಾನಂದಗೌಡ, ಅನಿಲ್ಕುಮಾರ್ ಇದ್ದರು.