

ಹಲಗೂರು: ದೇಶದ ರೈತರು, ಕಾರ್ಮಿಕರು, ಮಹಿಳೆಯರು, ಶೋಷಿತರು ಮತ್ತು ಹಿಂದುಳಿದ ವರ್ಗದ ಸಮುದಾಯಗಳಿಗೆ ಸಂವಿಧಾನದ ಮೂಲಕ ಸಮಾನತೆ ತಂದುಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಬಿಜೆಪಿಯವರಿಗೆ ಎಷ್ಟು ತಿರಸ್ಕಾರ ಭಾವನೆ ಇದೆ ಎಂಬುದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಹೇಳಿಕೆಯೇ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಹಲಗೂರಿನ ಬಹುಜನ ಸಮಾಜ ಪಕ್ಷದ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಈ ದೇಶದ ಜನಸಾಮಾನ್ಯರ ಏಳಿಗೆಗಾಗಿ ದುಡಿದ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಬಿಎಸ್ಪಿ ಖಂಡಿಸುತ್ತದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಡಾ.ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಗೌರವ ಇದ್ದದ್ದೇ ಆದರೆ ಅಮಿತ್ ಷಾ ಅವರನ್ನು ಕೂಡಲೇ ಮಂತ್ರಿ ಸ್ಥಾನದಿಂದ ವಜಾ ಮಾಡಿ ದೇಶದ ಜನತೆ ಬಳಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿ ಆಗಿದ್ದಾಗ ದೇಶದ ಸಂವಿಧಾನವನ್ನು ಪರಾಮರ್ಶೆ ಮಾಡಲು ನ್ಯಾ.ವೆಂಕಟಾಚಲ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗಿತ್ತು. ಬಿಎಸ್ಪಿಯ ಸಂಸ್ಥಾಪಕ ಕಾನ್ಸಿರಾಂ ದೇಶಾದ್ಯಂತ ಹೋರಾಟ ಮಾಡಿದ ಪ್ರತಿಫಲವಾಗಿ ವೆಂಕಟಾಚಲ ಆಯೋಗ ರದ್ದಾಯಿತು ಎಂದರು.
ಹಿಂದುಳಿದ ವರ್ಗದ ಸಮುದಾಯಕ್ಕೆ ವರವಾಗಿದ್ದ ಮಂಡಲ್ ಅಯೋಗದ ವಿರುದ್ಧ ಬಿಜೆಪಿ ಕಮಂಡಲ ಯಾತ್ರೆ ಆರಂಭಿಸಿತು. ಕಳೆದ ಹತ್ತು ವರ್ಷಗಳಿಂದಲೂ ಬಿಜೆಪಿ ಜನಸಾಮಾನ್ಯರನ್ನು ವಂಚಿಸುತ್ತಾ ಬರುತ್ತಿದ್ದು, ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಮನುಸ್ಮೃತಿ ಜಾರಿಗೆ ವೇದಿಕೆ ನಿರ್ಮಿಸುತ್ತಿದೆ ಎಂದು ಆರೋಪಿಸಿದರು.
ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಎಚ್.ಎನ್.ವೀರಭದ್ರಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಬಿ.ಡಿ.ರಾಜೇಂದ್ರ, ಮುಖಂಡರಾದ ಎಸ್.ಉಮೇಶ್, ಲೋಕೇಶ್‌ಗೌಡ, ರವಿ, ಕೆಂಪರಾಜು, ಆರಿಫ್, ಆನಂದ್‌ಕುಮಾರ್, ಎಂ.ಸುರೇಶ್, ಗೋವಿಂದರಾಜು, ಸಿದ್ದರಾಜು, ಎಸ್.ಎ.ರಾಜು ಹಲವರು ಇದ್ದರು.