

ಚಿಕ್ಕಮಗಳೂರು: ಇನ್ನೊಂದು ತಿಂಗಳಲ್ಲಿ ಎಲ್ಲ ಬಿಎಸ್‌ಎನ್‌ಎಲ್ ಟವರ್‌ಗಳು ಕಾರ್ಯಚಟುವಟಿಕೆ ಪ್ರಾರಂಭ ಮಾಡಿ ೨ಜಿ ಯಿಂದ ೪ಜಿ ಗೆ ಉನ್ನತೀಕರಿಸುವಂತೆ ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೨೦೩ ೨ಜಿ ಟವರ್‌ಗಳು, ೨೮೫ ೩ಜಿ ಟವರ್‌ಗಳು ಹಾಗೂ ೨೮ಟವರ್‌ಗಳು ೪ಜಿಗೆ ಲಭ್ಯವಿದ್ದರೂ ನೆಟ್‌ವರ್ಕ್ ಇಲ್ಲದ ಪರಿಸ್ಥಿತಿಯಿಂದ ಬಿಎಸ್‌ಎನ್‌ಎಲ್ ಗ್ರಾಹಕರು ಪರದಾಡುತ್ತಿದ್ದಾರೆ. ಬಿಎಸ್‌ಎನ್‌ಎಲ್ ಅಂದರೆ ವ್ಯಾಪಾರಕ್ಕಿಂತಲೂ ಹೆಚ್ಚಾಗಿ ಸೇವೆ ನೀಡುವ ಒಂದು ಸಂಸ್ಥೆ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಗೆ ಅಗತ್ಯವಾದ ಉಪಕರಣಗಳ ಕೊರತೆಯಾದರೆ ಪಟ್ಟಿಹಿಡಿದುಕೊಂಡು ದೆಹಲಿಗೆ ಬರಬೇಕು ಅಥವಾ ಲಿಖಿತವಾದ ಬೇಡಿಕೆ ಸಲ್ಲಿಸಬೇಕು. ಹಾಗೆಮಾಡಿದರೆ ಕೇಂದ್ರ ದೂರ ಸಂಪರ್ಕ ಸಚಿವರನ್ನು ಭೇಟಿ ಮಾಡಿ ತಮ್ಮೆಲ್ಲ ಬೇಡಿಕೆಗಳನ್ನು ಪೂರೈಸುವ ಜವಾಬ್ದಾರಿ ನನ್ನದು ಎಂದು ಹೇಳಿದರು.
ಇನ್ನು ಮುಂದೆ ವಿದ್ಯುತ್ ಸಂಪರ್ಕದ ಕಡಿತ ಆದಾಗ ಟವರ್ ಗಳ ಕಾರ್ಯನಿರ್ವಹಣೆಗೆ ಬ್ಯಾಟರಿ ಕೊರತೆಯಾಗಲಿ ಅಥವಾ ಜನರೇಟರ್‌ನ ಡೀಸೆಲ್ ಸಮಸ್ಯೆಯಾಗಲಿ ಬಾರದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಟವರ್ ಉಸ್ತುವಾರಿ ನೋಡಿಕೊಳ್ಳುವ ಸಿಬ್ಬಂದಿಗಳ ಕೊರತೆ ಇದ್ದರೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಒಪ್ಪಿಸಿದರೆ ಆರ್ಥಿಕ ನೆರವು ನೀಡಿ ನಿರ್ವಹಣೆಗಾಗಿ ಪಂಚಾಯಿತಿಗೆ ಪ್ರಾಯೋಗಿಕವಾಗಿ ಒಪ್ಪಿಸುವಂತೆ ಸಲಹೆ ನೀಡಿದರು.
ಅರ್ಜಿಗಳ ಮಹಾಪೂರ: ಮೊಬೈಲ್ ಟವರ್‌ಗಳ ಬಗ್ಗೆ ಸಭೆ ನಡೆಸುವಾಗ ಸಂಸದರಿಗೆ ಸಮಸ್ಯೆಗಳನ್ನು ಒಳಗೊಂಡ ಅರ್ಜಿಗಳ ಮಹಾಪೂರವೇ ಹರಿದುಬಂತು. ಜನರ ಬೇಡಿಕೆಯಂತೆ ಹೊಸ ಟವರ್‌ಗಳ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಿದರು. ಟವರ್‌ಗಳ ಅಳವಡಿಕೆ ಅರಣ್ಯ ಇಲಾಖೆ ಮತ್ತು ಸಮಸ್ಯೆ ಬಗ್ಗೆ ಮೆಸ್ಕಾಂ ಇಲಾಖೆಯ ಸಹಕಾರದ ಬಗ್ಗೆ ಬಿಎಸ್‌ಎನ್‌ಎಲ್ ಅಧಿಕಾರಿಗಳು ವಿಷಯ ಪ್ರಸ್ತಾಪಿಸಿದರು.
ಸಭೆಯಲ್ಲಿ ಡಿಸಿ ಮೀನಾ ನಾಗರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ ಮತ್ತಿತರರಿದ್ದರು.