

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕಿನ ವಿಜಯಪುರ ಹೋಬಳಿಯಲ್ಲಿ ಕಳೆದೆರಡು ತಿಂಗಳಿಂದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆಯಿಂದ ಗ್ರಾಹಕರು ಪರದಾಡುವಂತಾಗಿದೆ. ನೆಟ್‌ವರ್ಕ್ ಸಮಸ್ಯೆಗೆ ಬೇಸತ್ತು ಖಾಸಗಿ ನೆಟ್‌ವರ್ಕ್‌ಗಳತ್ತ ಗ್ರಾಹಕರು ಆಕರ್ಷಿತರಾಗುತ್ತಿದ್ದಾರೆ. ಇದು ಸರ್ಕಾರಿ ಸಾಮ್ಯದ ಇಲಾಖೆಗೆ ನಷ್ಟ ಉಂಟಾಗಲಿದೆ ಎಂಬ ಆತಂಕ ಸ್ಥಳೀರದ್ದಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಒಬ್ಬರ ಮೇಲೊಬ್ಬರು ಜವಾಬ್ದಾರಿ ಹೊರಿಸಿ ಜಾರಿಗೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಗ್ರಾಹಕರ ಅರೋಪವಾಗಿದೆ.
ಈ ಹಿಂದೆಯೂ ಇದೇ ಗೋಳು: ಈ ಹಿಂದೆ 2 ವರ್ಷ ಕಾಲ ವಿಜಯಪುರ ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಬ್ಯಾಟರಿ ಬ್ಯಾಕಪ್‌ಗಳು ಇಲ್ಲದ ಕಾರಣ ವಿದ್ಯುತ್ ಹೋದ ತಕ್ಷಣ ನೆಟ್‌ವರ್ಕ್ ತಪ್ಪಿ ಹೋಗುತ್ತಿದ್ದವು. ಕಳೆದ ವರ್ಷ ವಿಜಯಪುರ ಬಿಎಸ್‌ಎನ್‌ಎಲ್ ಸೇವಾ ಕೇಂದ್ರದಲ್ಲಿ ಹೊಸ ಬ್ಯಾಟರಿಗಳನ್ನು ಅಳವಡಿಸಿದ ನಂತರ ಉತ್ತಮ ಸೇವೆ ಪ್ರಾರಂಭವಾಯಿತು. ಆದರೆ ಕಳೆದ ಎರಡು ತಿಂಗಳಿಂದ ಮತ್ತೆ ಇದೇ ಸಮಸ್ಯೆ ಎದುರಾಗಿದೆ. ವಿಜಯಪುರದಲ್ಲಿರುವ ಹೊಸ ಬ್ಯಾಟರಿಯನ್ನು ದೇವನಹಳ್ಳಿಗೆ ಬದಲಾಯಿಸಿದ್ದು, ಇಲ್ಲಿ ಮತ್ತೆ ಹಳೆ ಬ್ಯಾಟರಿಯನ್ನೇ ಹಾಕಿರುವ ಕಾರಣ ಸಮಸ್ಯೆಗಳು ಎದುರಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಖಾಸಗಿಯತ್ತ ಗ್ರಾಹಕರ ಚಿತ್ತ: ಐದಾರು ತಿಂಗಳುಗಳಿಂದ ಖಾಸಗಿ ಕಂಪನಿಗಳು ಏಕಾಏಕಿ ದರ ಏರಿಸಿದ್ದರು, ಆದರೆ ಬಿಎಸ್‌ಎನ್‌ಎಲ್ ದರಗಳು ಕಡಿಮೆ ಇದ್ದ ಕಾರಣ ಸಾವಿರಾರು ಮಂದಿ ಇತರೆ ನೆಟ್‌ವರ್ಕ್‌ಗಳಿಂದ ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗಿದ್ದರು. ಇದರಿಂದ ಬಿಎಸ್‌ಎನ್‌ಎಲ್‌ಗೆ ವರವಾಗಿತ್ತು. ಆದರೆ ಮತ್ತೆ ಸಮಸ್ಯೆ ಉಂಟು ಮಾಡುವ ಮೂಲಕ ಗ್ರಾಹಕರನ್ನು ಕಳೆದುಕೊಳ್ಳುವ ಅಪಾಯ ಎದುರಾಗಿದೆ. ಬಿಎಸ್‌ಎನ್‌ಎಲ್ ಕಂಪನಿಗೆ ಪಟ್ಟಣಗಳ ಹೃದಯ ಭಾಗದಲ್ಲಿ ಉತ್ತಮ ಕಟ್ಟಡಗಳು ಟವರ್, ಸಿಬ್ಬಂದಿ ಎಲ್ಲ ಇದ್ದರೂ ಗ್ರಾಹಕರಿಗೆ ಸಮರ್ಪಕ ಸೇವೆ ನೀಡುವಲ್ಲಿ ಇಲಾಖೆ ಹಿಂದುಳಿದಿದೆ.
ರಾಜ್ಯಾದ್ಯಂತ 4ಜಿ ನೆಟ್‌ವರ್ಕ್‌ಗಾಗಿ ಅಳವಡಿಸುವ ಕೆಲವೊಂದು ಅಭಿವೃದ್ದಿ ಕೆಲಸಗಳು ನಡೆಯುತ್ತಿವೆ. ಇದೇ ವರ್ಷದ ಡಿಸೆಂಬರ್ ಮೊದಲ ವಾರದ ಹೊತ್ತಿಗೆ ಎಲ್ಲ ಸಮಸ್ಯೆಗಳು ಸರಿ ಹೋಗುತ್ತದೆ, ಇದರಿಂದಾಗಿ ಪ್ರಸ್ತುತ ಪಟ್ಟಣದಲ್ಲಿ ನೆಟ್‌ವರ್ಕ್ ಸಮಸ್ಯೆ ಎದುರಾಗಿದೆ.
ನರಸಿಂಹಮೂರ್ತಿ, ಡಿಜಿಎಂ ನರಸಿಂಹಮೂರ್ತಿ ವಿಜಯಪುರ ಬಿಎಸ್‌ಎನ್‌ಎಲ್ ಕಚೇರಿ