ಕರಿಕೆಯಲ್ಲಿ ಟವರ್ ಇದ್ದರೂ ಪ್ರಯೋಜನವಿಲ್ಲ

BSNL
Published on

ಮಡಿಕೇರಿ:

ಕೊಡಗು- ಕೇರಳ ಗಡಿಭಾಗದಲ್ಲಿರುವ ಕರಿಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನೂತನ ಬಿಎಸ್‌ಎನ್‌ಎಲ್ ಟವರ್ ನಿರ್ಮಾಣಗೊಂಡು ಎರಡು ವರ್ಷ ಕಳೆದರೂ ಕಾರ್ಯಾರಂಭಗೊAಡಿಲ್ಲ. ಇದರಿಂದ ನೆಟ್ ವರ್ಕ್ ಸಮಸ್ಯೆ ಎದುರಾಗಿದ್ದು, ಈ ಕುರಿತು ಕರಿಕೆ ಗ್ರಾ.ಪಂ ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್ ಅವರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಕರಿಕೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರು, ವಿದ್ಯಾರ್ಥಿಗಳು, ಖಾಸಗಿ ಸಂಸ್ಥೆಗಳು, ಗ್ರಾಮ ಪಂಚಾಯ್ತಿ ಕಚೇರಿ ಹಾಗೂ ಸರ್ಕಾರಿ ಕಚೇರಿ ಸಿಬ್ಬಂದಿ ನೆಟ್ ವರ್ಕ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಕರೆ ಮಾಡುವುದಕ್ಕೂ ನೆಟ್ ವರ್ಕ್ ಸಿಗುತ್ತಿಲ್ಲ. ಗ್ರಾ.ಪಂ. ಕೆಲಸ ಕಾರ್ಯಗಳು ಕುಂಠಿತಗೊಳ್ಳುತ್ತಿದೆ. ಎಲ್ಲಾ ಕಾರ್ಯಚಟುವಟಿಕೆಗಳು ಅಂತರ್ಜಾಲ ಮತ್ತು ನಿಸ್ತಂತು ವ್ಯವಸ್ಥೆಯ ಮೂಲಕವೇ ನಡೆಯುವ ಈ ಕಾಲಘಟ್ಟದಲ್ಲಿ ನೆಟ್ ವರ್ಕ್ ಸೌಲಭ್ಯವೇ ಇರದಿದ್ದರೆ ಹೇಗೆ ಕಾರ್ಯ ನಿರ್ವಹಿಸುವುದು ಎಂದು ಅವರು ಪ್ರಶ್ನಿಸಿದ್ದಾರೆ.

ನೆಟ್ ವರ್ಕ್ ಸಮಸ್ಯೆ ತೀವ್ರ ಸ್ವರೂಪವನ್ನು ಪಡೆದುಕೊಂಡ ಸಂದರ್ಭ ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಕರಿಕೆ ಚೆತ್ತುಕಾಯದಲ್ಲಿ ನೂತನ ಬಿಎಸ್‌ಎನ್‌ಎಲ್ ಟವರ್ ನಿರ್ಮಿಸಲಾಯಿತು. ಆದರೆ ಟವರ್ ನಿರ್ಮಾಣಗೊಂಡಿತೇ ಹೊರತು ಇಲ್ಲಿಯವರೆಗೆ ಕಾರ್ಯಾರಂಭ ಮಾಡಿಲ್ಲ. ಕರಿಕೆ ವ್ಯಾಪ್ತಿಯಲ್ಲಿ ಬಿಎಸ್‌ಎನ್‌ಎಲ್ ಟವರ್ ಹೊರತು ಪಡಿಸಿದರೆ ಬೇರೆ ಯಾವುದೇ ನೆಟ್ ವರ್ಕ್ ಅಥವಾ ಟವರ್ ಗಳಿಲ್ಲ.

ನೂತನ ಟವರ್ ನಿರ್ಮಾಣಗೊಂಡಾಗ ನೆಟ್ ವರ್ಕ್ ಸಮಸ್ಯೆ ಶೀಘ್ರ ಬಗೆಹರಿಯಲಿದೆ ಎನ್ನುವ ಆಶಾಭಾವನೆ ಗ್ರಾಮಸ್ಥರಲ್ಲಿತ್ತು. ಆದರೆ ಭರವಸೆ ಹುಸಿಯಾಗಿದ್ದು, ಜಿಲ್ಲಾಧಿಕಾರಿಗಳು ಸ್ವಯಂ ಆಸಕ್ತಿ ವಹಿಸಿ ಗಡಿ ಗ್ರಾಮದ ನೆಟ್ ವರ್ಕ್ ಸಮಸ್ಯೆಗೆ ಮುಕ್ತಿ ಹಾಡಬೇಕೆಂದು ಬಾಲಚಂದ್ರನ್ ನಾಯರ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net