ಹೃದಯಾಘಾತದಿಂದ ಬಿಎಸ್‌ಎಫ್ ಯೋಧ ಸಾವು

1000629596
Published on

ನಾಗಮಂಗಲ: ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಬಿ.ಮಲ್ಲೇನಹಳ್ಳಿ ಗ್ರಾಮದ ಬಿಎಸ್‌ಎಫ್ ಯೋಧ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ತಾಲೂಕಿನ ಬಿ.ಮಲ್ಲೇನಹಳ್ಳಿ ಗ್ರಾಮದ ಎಂ.ಎಸ್.ಗುಣೇಶ (44) ಮೃತರು. ಮಣಿಪುರದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಗುಣೇಶ ಆ.8 ರಂದು ರಜೆಯಲ್ಲಿ ಸ್ವಗ್ರಾಮಕ್ಕೆ ಆಗಮಿಸಿದ್ದರು. ಮಂಗಳವಾರ ಸ್ವಗ್ರಾಮದಿಂದ ಬಿಂಡಿಗನವಿಲೆಗೆ ಕಾರಿನಲ್ಲಿ ತೆರಳಿದ್ದಾಗ ಎದೆನೋವು ಕಾಣಿಸಿಕೊಂಡಿದ್ದರಿಂದ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಅಲ್ಲಿಯೇ ಮೃತಪಟ್ಟಿದ್ದಾರೆ. ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಗ್ರಾಮಸ್ಥರು ಯೋಧನ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಅವರನ್ನು ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸಿದರು. ಅಷ್ಟರಲ್ಲಿ ಮೃತಪಟ್ಟಿದ್ದರು. ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಕಳೆದ 23 ವರ್ಷಗಳಿಂದ ಬಿಎಸ್‌ಎಫ್ ಯೋಧರಾಗಿ ಜಮ್ಮು-ಕಾಶ್ಮೀರ, ಪಶ್ಚಿಮ ಬಂಗಾಳ, ರಾಜಸ್ಥಾನ, ಬಿಹಾರ, ಪಂಜಾಬ್, ತ್ರಿಪುರ ಸೇರಿದಂತೆ ವಿವಿಧ ರಾಜ್ಯಗಳ ಗಡಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮಣಿಪುರದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ರಜೆಯಲ್ಲಿ ಸ್ವಗ್ರಾಮಕ್ಕೆ ಬಂದಿದ್ದರು.

ಸೇನೆಗೆ ಸೇರಿ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವಾಗ ಬಿಹಾರ ರಾಜ್ಯದ ನಕ್ಸಲರು ಇರುವಂತಹ ಅತಿಸೂಕ್ಷ್ಮ ಪ್ರದೇಶದಲ್ಲಿ ನಕ್ಸಲರ ಮೇಲೆ ಫೈರಿಂಗ್ ಮಾಡುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದ್ದಕ್ಕಾಗಿ ಕಡ್ಕನ್ ಕ್ಯಾಂಪ್‌ನಲ್ಲಿ ಬೆಸ್ಟ್ ಶೂಟರ್ ಅವಾರ್ಡ್ ಪಡೆದಿದ್ದರು.

ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಸೇನೆ ವತಿಯಿಂದ ಮೃತ ಯೋಧನಿಗೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಬಿ.ಮಲ್ಲೇನಹಳ್ಳಿಯ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಿತು. ತಂದೆ, ಪತ್ನಿ, ಪುತ್ರ, ಪುತ್ರಿ, ಸಹೋದರ, ಸಹೋದರಿ ಇದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ಮಾಜಿ ಶಾಸಕ ಸುರೇಶ್‌ಗೌಡ ಇತರರು ಮೃತ ಯೋಧನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net