

ಕೊಪ್ಪಳ: ಸೇನೆಯ ವಿವಿಧ ಹುದ್ದೆಗಳ ಭರ್ತಿಗೆ ಕೊಪ್ಪದಲ್ಲಿ ನೇಮಕಾತಿ ರ್ಯಾಲಿ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.
ಬೆಳಗಾವಿ ಸೇನಾ ನೇಮಕಾತಿ ರ್ಯಾಲಿ ಕಚೇರಿಯಿಂದ ಡಿ.3ರಿಂದ 15ವರೆಗೆ ರ್ಯಾಲಿ ನಡೆಯಲಿದೆ. ಬೆಳಗಾವಿ, ಕಲಬುರ್ಗಿ, ಕೊಪ್ಪಳ, ಯಾದಗಿರಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಸುಗಮವಾಗಿ ನಡೆಸಬೇಕಿದೆ. ಅಭ್ಯರ್ಥಿಗಳಿಗೆ ತೊಂದರೆ ಆಗದಂತೆ, ಕ್ರೀಡಾಂಗಣದಲ್ಲಿ ಸೂಕ್ತ ಬ್ಯಾರಿಕೇಡಿಂಗ್ ವ್ಯವಸ್ಥೆ, ತಾತ್ಕಾಲಿಕ ಶೌಚಗೃಹ, ಕುಡಿವ ನೀರು, ವಿದ್ಯುತ್ ದೀಪ, ಹಣ್ಣು, ಉಪಾಹಾರ ಮಳಿಗೆ ಸೇರಿ ಇತರ ವ್ಯವಸ್ಥೆ ಮಾಡಿ. ಅಹಿತಕರ ಘಟನೆಗಳಿಗೆ ಅವಕಾಶ ನೀಡಬೇಡಿ. ಶಿಸ್ತುಬದ್ಧವಾಗಿ ನಡೆಸಿ. ವಿವಿಧ ಇಲಾಖೆಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದು, ಎಲ್ಲರೂ ಅವರವರ ಕರ್ತವ್ಯ ಸರಿಯಾಗಿ ನಿಭಾಯಿಸುವಂತೆ ತಾಕೀತು ಮಾಡಿದರು.
ನೇಮಕಾತಿ ನಿರ್ದೇಶಕ ನಿಶಾಂತ್ ಶೆಟ್ಟಿ ಮಾತನಾಡಿ, ರ್ಯಾಲಿಯಲ್ಲಿ ಆರು ಜಿಲ್ಲೆಗಳ 9,130 ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
ಕರ್ನಲ್ ಎ.ಕೆ.ಉಪಾಧ್ಯೇಯ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಬಾರಿ ಅಚ್ಚುಕಟ್ಟಾಗಿ ನೇಮಕಾತಿ ರ್ಯಾಲಿ ನಡೆದಿದೆ. ಈ ಬಾರಿಯೂ ಇಲ್ಲಿಯೇ ಹಮ್ಮಿಕೊಂಡಿದ್ದೇವೆ. ಸಮರ್ಪಕವಾಗಿ ಆಯೋಜಿಸಲು ಜಿಲ್ಲಾಡಳಿತ ಹಾಗೂ ಇತರ ಇಲಾಖೆಗಳ ಸಹಕಾರ ಅಗತ್ಯವೆಂದರು.
ಎಸ್ಪಿ ಡಾ. ರಾಮ್ ಎಲ್.ಅರಸಿದ್ದಿ, ಎಡಿಸಿ ಸಿದ್ರಾಮೇಶ್ವರ, ಎಎಸ್ಪಿ ಹೇಮಂತ್ ಕುಮಾರ್, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್, ಮೇಜರ್ ಎ.ವಿಶ್ವನ್ಸಾಥ ಸುಬೆದಾರ, ಮೆಜರ್ ದಿನೇಶ ಲೋಹಿಯಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜು ತಳವಾರ, ಹಿಂದುಳಿದ ವರ್ಗಗಳ ಇಲಾಖೆ ಉಪನಿರ್ದೇಶಕ ಸುರೇಶ ಕೋಕರೆ, ತಹಸೀಲ್ದಾರ್ ವಿಠ್ಠಲ ಜಾಬಗೌಡರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ ಇತರರಿದ್ದರು.