

ಕಡಬ: ತಾಲೂಕಿನ ರೆಂಜಿಲಾಡಿ ಗ್ರಾಮದ ನಿಡ್ಮೇರು ಎಂಬಲ್ಲಿ ಮಂಗಳೂರಿನ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಗುರುವಾರ ರಾತ್ರಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.
ರೆಂಜಿಲಾಡಿ ನಿಡ್ಮೇರು ನಿವಾಸಿ ರವೀಂದ್ರ ಅವರ ಪುತ್ರಿ ರಶ್ಮಿತಾ(18) ಮೃತ ವಿದ್ಯಾರ್ಥಿನಿ. ಕೆಲದಿನಗಳಿಂದ ಅನಾರೋಗ್ಯಪೀಡಿತರಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆ ವೇಳೆ ವೈದ್ಯಕೀಯ ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿರಲಿಲ್ಲ. ಆರೋಗ್ಯವಾಗಿದ್ದ ರಶ್ಮಿತಾ ಗುರುವಾರ ರಾತ್ರಿ 10.30ಕ್ಕೆ ಹಠಾತ್ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ರಶ್ಮಿತಾ ಸಾವಿನ ಹಿನ್ನೆಲೆಯಲ್ಲಿ ಕಾಲೇಜಿನ ರಶ್ಮಿತಾ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿತ್ತು.