ಬಿಎಸ್‌ವೈ ರಾಜಕೀಯ ಕಾರ್ಯದರ್ಶಿಯಾಗಿ ಸಂತೋಷ್ ನೇಮಕ ಸಾಧ್ಯತೆ

N R Santhosh
Published on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪಿಎ ಆಗಿದ್ದ ಎನ್.ಆರ್. ಸಂತೋಷ್ ಅವರನ್ನು ರಾಜ್ಯ ಸಚಿವರ ಸ್ಥಾನಮಾನದೊಂದಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲು ನಿರ್ಧರಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.

ಸಂತೋಷ್‌ಗೆ ಮನ್ನಣೆ ನೀಡಿರುವುದಕ್ಕೆ ಆರ್‌ಎಸ್‌ಎಸ್ ಮತ್ತು ನಿಷ್ಠಾವಂತ ಬಿಜೆಪಿ ಗುಂಪು ಅಪಸ್ವರ ಎತ್ತಿದೆ ಎಂದು ತಿಳಿದುಬಂದಿದೆ. ಪಕ್ಷಕ್ಕಾಗಿ ದುಡಿಯುತ್ತಿರುವವರನ್ನು ಬಿಟ್ಟು ಇವರಿಗೆ ಅವಕಾಶ ನೀಡುವುದಾದರೂ ಏಕೆ ಎಂಬ ಪ್ರಶ್ನೆ ಕೇಳಿ ಬಂದಿದೆ.

ಆಪರೇಷನ್ ಕಮಲ ವಿಚಾರದಲ್ಲಿ ಮುಂಚೂಣಿಯಲ್ಲಿದ್ದ ಸಂತೋಷ್ ಆ ನಂತರ ಬಿಎಸ್‌ವೈರಿಂದ ದೂರವಾಗಿದ್ದರು. ಯಡಿಯೂರಪ್ಪ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲಾಗಿದೆ ಎಂದು ಹೇಳಲಾಗಿದ್ದ ಎರಡು ಪತ್ರಗಳನ್ನು ಬರೆದವರು ಸಂತೋಷ್ ಎಂದೇ ವದಂತಿಗಳು ರಾಜಕೀಯ ವಲಯದಲ್ಲಿ ಹರಿದಾಡಿದ್ದವು. ಈಗ ಮತ್ತೆ ಸಂತೋಷ್ ಸಿಎಂ ಆಪ್ತ ವಲಯ ಸೇರಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಸಂತೋಷ್ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾದರೆ ನಾಲ್ಕನೇ ರಾಜಕೀಯ ಕಾರ್ಯದರ್ಶಿಯಾಗುತ್ತಾರೆ. ಶಾಸಕರಾದ ಎಸ್.ಆರ್. ವಿಶ್ವನಾಥ್, ಎಂ.ಪಿ. ರೇಣುಕಾಚಾರ್ಯ. ಕಿಸಾನ್ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಶಂಕರಗೌಡ ಪಾಟೀಲ್ ರಾಕೀಯ ಕಾರ್ಯದರ್ಶಿಗಳಾಗಿದ್ದಾರೆ. ಪತ್ರಕರ್ತ ಎಂ.ಬಿ. ಮರಮಕಲ್ ರಾಜಕೀಯ ಸಲಹೆಗಾರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net