

ಗೋಕಾಕ: ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಭಿವೃದ್ಧಿಗೆ ಪೂರಕವಾದಂತಹ ಕಾರ್ಯ ಮಾಡುತ್ತ ಬಂದಿದೆ. ಜಲಸಂಪನ್ಮೂಲ ಹಾಗೂ ವಿವಿಧ ಇಲಾಖೆಗಳ ಅಡಿಯಲ್ಲಿ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡು ಗೋಕಾಕ ತಾಲೂಕನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಭೂಸೇನಾ ನಿಗಮದಿಂದ ತಾಲೂಕಿನ ಮಕ್ಕಳಗೇರಿ ಮತ್ತು ಪುಡಕಲಕಟ್ಟಿ ಗ್ರಾಮಗಳಿಗೆ ಎಸ್‌ಸಿ, ಎಸ್‌ಟಿ ಅನುದಾನದಡಿ ಮಂಜೂರಾದ 15 ಲಕ್ಷ ರೂ. ಮತ್ತು 35 ಲಕ್ಷ ರೂ. ಮೊತ್ತದ ಸಿಸಿ ರಸ್ತೆ ಹಾಗೂ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಜಿಪಂ ಸದ್ಯಸ್ಯರಾದ ಟಿ.ಆರ್. ಕಾಗಲ, ಮಡೆಪ್ಪ ತೋಳಿನವರ, ಗ್ರಾಪಂ ಅಧ್ಯಕ್ಷ ವಿಠ್ಠಲ ಕರಿಗಾರ, ತಾಪಂ ಸದಸ್ಯ ಭರಮಣ್ಣ ಮುತ್ತೆಣ್ಣವರ, ಶಿವರಾಯ ದಂಡಿನ, ಭೀಮಶಿ ಗೋರಬಾಳ, ರಾಮಚಂದ್ರ ದುರದುಂಡಿ, ಪುಂಡಲೀಕ ಕಾಗಲ, ಮುದಕಪ್ಪ ಮೆಳವಂಕಿ ಇದ್ದರು.