ಆಟೋ ಚಾಲಕನ ಬರ್ಬರ ಹತ್ಯೆ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ?

Crime Logo
Published on

ಬೆಂಗಳೂರು: ಸ್ನೇಹಿತರ ಜತೆ ರಸ್ತೆ ಬದಿ ನಿಂತು ಮಾತನಾಡುತ್ತಿದ್ದ ಆಟೋ ಚಾಲಕನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬ್ಯಾಟರಾಯನಪುರದ ಟಿಂಬಲ್ ಯಾರ್ಡ್ ಲೇಔಟ್‌ನಲ್ಲಿ ನಡೆದಿದೆ.


ಬ್ಯಾಟರಾಯನಪುರದ ಎಂಟಿಸಿ ಲೇಔಟ್ ನಿವಾಸಿ ಅರುಣ್ (೨೪) ಕೊಲೆಯಾದ ಆಟೋ ಚಾಲಕ. ಮಂಗಳವಾರ ರಾತ್ರಿ ೧೦ ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ವೃತ್ತಿಯಲ್ಲಿ ಆಟೋ ಚಾಲಕನಾಗಿ ಅರುಣ್, ಮಂಗಳವಾರ ರಾತ್ರಿ ೧೦ ಗಂಟೆ ಸುಮಾರಿಗೆ ಟಿಂಬರ್ ಯಾರ್ಡ್ ಲೇಔಟ್‌ನಲ್ಲಿ ಸ್ನೇಹಿತರ ಜತೆ ರಸ್ತೆ ಬದಿ ಮಾತನಾಡುತ್ತಾ ನಿಂತಿದ್ದ. ಈ ವೇಳೆ ೨-೩ ಬೈಕ್‌ಗಳಲ್ಲಿ ಬಂದ ಆರೇಳು ಮಂದಿ ದುಷ್ಕರ್ಮಿಗಳು ಏಕಾಏಕಿ ಅರುಣ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಆತನ ಸ್ನೇಹಿತರು ಪ್ರಾಣ ಭಯದಿಂದ ಸ್ಥಳದಿಂದ ತಪ್ಪಿಸಿಕೊಂಡು ಓಡಿದ್ದಾರೆ.


೧೫ ಕ್ಕೂ ಹೆಚ್ಚು ಬಾರಿ ಇರಿತ:
ಓಡುವಾಗ ಕೆಳಗೆ ಬಿದ್ದ ಅರುಣ್‌ಗೆ ದುಷ್ಕರ್ಮಿಗಳು ಸುಮಾರು ೧೫ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾರೆ. ಕೃತ್ಯದ ಮಾದರಿ ಗಮನಿಸಿದರೆ ಹಳೇ ದ್ವೇಷದಿಂದಲೇ ಕೃತ್ಯ ಎಸಗಿದ್ದಾರೆ ಎಂಬುದು ಗೊತ್ತಾಗಿದೆ. ಜತೆಗೆ ಅರುಣ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎಂದು ತಿಳಿದು ಬಂದಿದೆ. ಈ ಆಯಾಮದಲ್ಲೂ ತನಿಖೆ ನಡೆಸಲಾಗುತ್ತದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಮದುವೆಗೆ ಒಂದು ತಿಂಗಳು ಬಾಕಿ:
ಆಟೋ ಚಾಲಕ ಅರುಣ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆಯ ಪಾಲಕರಿಗೆ ತಮ್ಮ ಪ್ರೀತಿಯ ವಿಚಾರ ತಿಳಿಸಿ ಮದುವೆಗೂ ಒಪ್ಪಿಸಿದ್ದ. ಹೀಗಾಗಿ ಜನವರಿಯಲ್ಲಿ ಯುವತಿಯನ್ನು ವರಿಸಬೇಕಿತ್ತು. ಅಷ್ಟರಲ್ಲಿ ದುಷ್ಕರ್ಮಿಗಳು ಅರುಣ್‌ನನ್ನು ಭೀಕರವಾಗಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net