ಹುಬ್ಬಳ್ಳಿ ಧಾರವಾಡದಲ್ಲಿ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ,  ಎಚ್ಇಎಸ್ಎಸ್ ಎಜಿ, ಹೆಸ್ ಇಂಡಿಯಾ ಮತ್ತು ಎಸ್ಎಸ್ಬಿ ಎಜಿ ಕಂಪನಿಗಳೊಂದಿಗೆ ಒಪ್ಪಂದ

IMG-20250412-WA0010-1.jpg
Published on

ಹುಬ್ಬಳ್ಳಿ: ಜಾರಿಯಾಗಿ ಕೇವಲ ಏಳು (2018) ವರ್ಷದಲ್ಲಿ ಸಾವಿರ ಕೋಟಿ ರೂ. ವೆಚ್ಚದ ಯೋಜನೆಯೊಂದು ತೆರೆಮರೆಗೆ ಸರಿಯುವ ಕಾಲ ಸನ್ನಿಹಿತವಾದಂತಾಗಿದೆ.

ಹುಬ್ಬಳ್ಳಿ ಧಾರವಾಡ ಅವಳಿ ನಗರದ ಮಧ್ಯೆ ಈಗಿರುವ ಬಿಆರ್ಟಿಎಸ್ ಯೋಜನೆ ಬದಲಾಗಿ ಹೊಸದೊಂದು ಕ್ಣಿಪ್ರ ಸಾರಿಗೆ ವ್ಯವಸ್ಥೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಬಗ್ಗೆ ಬೆಂಗಳೂರಿನ ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಶುಕ್ರವಾರ ಸಂಜೆ ಸಭೆ ನಡೆದಿದ್ದು, ಅಲ್ಲಿ ಅವಳಿ ನಗರ ಮಧ್ಯೆ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆ (ಇಲೆಕ್ಟ್ರಿಕ್ ರ್ಯಾಪಿಡ್ ಟ್ರಾನ್ಸಿಟ್, ಇ- ಆರ್ಟಿ) ಜಾರಿ ಕುರಿತು ಸಾಧಕ- ಬಾಧಕಗಳ ಕುರಿತು ಚರ್ಚಿಸಲಾಗಿದೆ.

ಇದರಿಂದಾಗಿ ಬಿಆರ್ಟಿಎಸ್ ಯೋಜನೆಯ ಅವೈಜ್ಞಾನಿಕ ಜಾರಿಯಿಂದಾಗಿ ಸಾರ್ವಜನಿಕರು ಅನುಭವಿಸುತ್ತಿರುವ ಯಾತನೆಗೆ ಒಂದಿಷ್ಟು ಪರಿಹಾರ ಸಿಗಬಹುದೇ ಎಂಬ ಆಶಯಗಳು ಜನರಲ್ಲಿ ಮೂಡಿವೆ.

ಏನಿದು ಇ ಆರ್ ಟಿ:
ಅವಳಿ ನಗರದಲ್ಲಿ ಉದ್ದೇಶಿತ ಯೋಜನೆಯ ಸಾಧ್ಯಾಸಾಧ್ಯತೆ ಮತ್ತು ಅವಕಾಶಗಳ ಬಗ್ಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಸಭೆಯಲ್ಲಿ ವಿವರಣೆ ನೀಡಿದರು. ಸಚಿವ ಲಾಡ್ ಕೆಲ ತಿಂಗಳ ಹಿಂದೆ ಸ್ವಿಟ್ಜರ್ಲ್ಯಾಂಡ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಯೋಜನೆಯ ಕಾರ್ಯ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಿದ್ದರು.

ಇದು ಸಂಪೂರ್ಣ ವಿದ್ಯುತ್ ಚಾಲಿತ ವ್ಯವಸ್ಥೆಯಾಗಿದ್ದು, ನಗರದಲ್ಲಿ ಎತ್ತರಿಸಿದ ರಸ್ತೆ ಹಾಗೂ ಇತರೆಡೆ ನೆಲದ ಮೇಲೆ ಸಂಚರಿಸಲಿದೆ. ಇದರಲ್ಲಿ 250 ಜನರು ಏಕಕಾಲಕ್ಕೆ ಪ್ರಯಾಣಿಸಬಹುದಾಗಿದೆ. ಕಳೆದ ಒಂದು ವರ್ಷದಿಂದ ಯೋಜನೆಯ ಕಾರ್ಯ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲಾಗಿದೆ. ಮೆಟ್ರೊ ಮಾದರಿಯ ಈ ಸಂಚಾರ ವ್ಯವಸ್ಥೆ ಯುರೋಪಿನ ಹಲವು ರಾಷ್ಟ್ರಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಕಂಪನಿಗಳ ಪ್ರತಿನಿಧಿಗಳು ಮಾಹಿತಿ ನೀಡಿದರು.

ಹುಬ್ಬಳ್ಳಿ ಧಾರವಾಡದಲ್ಲಿ ಈ ಯೋಜನೆ ಯಶಸ್ವಿಯಾದರೆ, ರಾಜ್ಯದ ಇತರ ಎರಡನೇ ಹಂತದ ನಗರಗಳಿಗೂ ಇದನ್ನು ವಿಸ್ತರಿಸಬಹುದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆ (ಇ- ಆರ್ಟಿ) ಆರಂಭಿಸುವ ಕುರಿತು ಎಚ್ಇಎಸ್ಎಸ್ಎಜಿ, ಹೆಸ್ ಇಂಡಿಯಾ ಮತ್ತು ಎಸ್ಎಸ್ಬಿ ಎಜಿ ಕಂಪನಿಗಳೊಂದಿಗೆ ಇದೇ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಯೋಜನೆ ಅನುಷ್ಠಾನ ಕುರಿತು ಮೂರು ತಿಂಗಳ ಒಳಗಾಗಿ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹಾದೇವಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅಡ್ವಕೇಟ್ ಜನರಲ್ ಶಶಿಕಿರಣ ಶೆಟ್ಟಿ, ಹೆಚ್ಇಎಸ್ಎಸ್ ಎಜಿ ಕಂಪನಿಯ ಸುಸಾನ್ ವಾನ್ ಸುರಿ, ಎಸ್ಎಸ್ಬಿ ಕಂಪನಿಯ ನಿರ್ದೇಶಕ ಬುರಾಕ್ ಸೆನಸರ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net