

ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆಗೆ ಸಹಕಾರ ನೀಡುವಂತೆ ಬಿ.ಆರ್.ಎಸ್. ಹೆಲ್ತ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಡಳಿತ ಮಂಡಳಿ ರಾಜ್ಯ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಅವರಿಗೆ ಮನವಿ ಸಲ್ಲಿಸಿದ್ದು, ಜಿಲ್ಲಾಡಳಿತ 8 ಮಂದಿ ತಜ್ಞ ವೈದ್ಯರ ನೇಮಕಕ್ಕೆ ಮುಂದಾಗಿದೆ.
ರಾಜ್ಯ ಸರ್ಕಾರ ಆಸ್ಪತ್ರೆಯಲ್ಲಿ ಸೇವೆಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಅಗತ್ಯ ಸಿಬ್ಬಂದಿ, ಔಷಧ ಮತ್ತು ವೈದ್ಯಕೀಯ ಪರಿಕರಗಳನ್ನು ಪೂರೈಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ಸೋಮವಾರ ಜಿಲ್ಲಾ ವೈದ್ಯಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿಯಲ್ಲಿ ಆಸ್ಪತ್ರೆಗೆ ಇಬ್ಬರು ಸ್ತ್ರೀರೋಗ ತಜ್ಞರು, ಇಬ್ಬರು ಮಕ್ಕಳ ತಜ್ಞರು ಹಾಗೂ ಒಂದು ಮೈಕ್ರೋಬಯಾಲಾಜಿ ವೈದ್ಯರ ಹುದ್ದೆ ಭರ್ತಿಗೆ ಸಂದರ್ಶನ ನಡೆದಿದೆ. ಅನಸ್ತೇಶಿಯಾ ವಿಭಾಗದಲ್ಲಿ 3 ತಜ್ಞ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಆಸ್ಪತ್ರೆಯಲ್ಲಿದ್ದ ಬಹುತೇಕ ವೈದ್ಯರು ವೇತನ ಬಾರದ ಹಿನ್ನೆಲೆಯಲ್ಲಿ ಸಂಸ್ಥೆ ತೊರೆದಿದ್ದು, ಪ್ರಸ್ತುತ ಇಬ್ಬರು ಸ್ತ್ರೀರೋಗ ತಜ್ಞರು ಮಾತ್ರ ಇದ್ದಾರೆ. ನವಜಾತ ಶಿಶು ವಿಭಾಗಕ್ಕೆ ತುರ್ತಾಗಿ ತಾತ್ಕಾಲಿಕ ನೆಲೆಯಲ್ಲಿ ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞ ವೈದ್ಯರೊಬ್ಬರನ್ನು ವರ್ಗಾಯಿಸಲಾಗಿದೆ.
2018ರಲ್ಲಿ ಕಾರ್ಯಾರಂಭ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಒಟ್ಟು 4.07 ಎಕರೆ ವಿಸ್ತೀರ್ಣದ ಮೂರು ನಿವೇಶನಗಳನ್ನೊಳಗೊಂಡ ಜಮೀನನ್ನು ಅನಿವಾಸಿ ಭಾರತೀಯ ಉದ್ಯಮಿ ಕಾಪು ಮೂಲದ ಡಾ. ಬಿ.ಆರ್. ಶೆಟ್ಟಿ ಆಡಳಿತ ನಿರ್ದೇಶಕರಾಗಿದ್ದ ಬಿ.ಆರ್.ಎಸ್. ಹೆಲ್ತ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಕಂಪನಿಗೆ 30 ವರ್ಷ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿತ್ತು. 2018ರಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ 200 ಬೆಡ್‌ಗಳ ಸುಸಜ್ಜಿತ ಆಸ್ಪತ್ರೆ ಕಾರ್ಯಾರಂಭ ಮಾಡಿದ್ದು, ಆಸ್ಪತ್ರೆಯ ಮೇಲುಸ್ತುವಾರಿಗೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ರಚಿಸಲಾಗಿತ್ತು. ಸಿಬ್ಬಂದಿ ನೇಮಕ ಮತ್ತು ದೈನಂದಿನ ನಿರ್ವಹಣೆ ಜವಾಬ್ದಾರಿ ಬಿಆರ್‌ಎಸ್ ಸಂಸ್ಥೆ ವಹಿಸಿತ್ತು.
ಸಂಕಷ್ಟದಲ್ಲಿ ಕಂಪನಿ ಆಡಳಿತ: ಇತ್ತೀಚೆಗೆ ಡಾ. ಬಿ.ಆರ್. ಶೆಟ್ಟಿ ಅವರು ಅಬುಧಾಬಿಯ ಎನ್‌ಎಂಸಿ ಹೆಲ್ತ್ ಕೇರ್ ಸಂಸ್ಥೆಗೆ ರಾಜೀನಾಮೆ ನೀಡಿ ಹೊರಬಂದಿದ್ದು, ಅಲ್ಲಿನ ಸರ್ಕಾರ ಕಂಪನಿಯ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದರಿಂದ ಶೆಟ್ಟಿಯವರ ಒಡೆತನದ ಬಿ.ಆರ್.ಎಸ್. ಹೆಲ್ತ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ವಹಣೆಗಾಗಿ ಸರ್ಕಾರದ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಖಾಸಗಿ ಆಸ್ಪತ್ರೆ ನಿರ್ಮಾಣ ಅತಂತ್ರ: ಹಳೆಯ ಹಾಜಿ ಅಬ್ದುಲ್ಲ ಸರ್ಕಾರಿ ಆಸ್ಪತ್ರೆ ಕಟ್ಟಡವನ್ನು ಕೆಡವಿ ಹೊಸದಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿ ಇದರ ಆದಾಯದಲ್ಲಿ ಬಿಆರ್‌ಎಸ್ ಆಸ್ಪತ್ರೆ ನಿರ್ವಹಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪ್ರಾರಂಭದಲ್ಲೇ ಅನೇಕ ತಡೆಗಳು ಎದುರಾಗಿದ್ದು, 3 ಅಂತಸ್ತುಗಳ ನೆಲ ಮಹಡಿಗೆ ರಚನೆ ಝಡ್ ಆರ್ (ರೆನಲ್ ರೆಗ್ಯೂಲೇಶನ್) ನಿಯಮ ಉಲ್ಲಂಘನೆ ಎಂಬ ಕಾರಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ ಕಟ್ಟಡ ನಿರ್ಮಾಣಕ್ಕೆ ಅನುಮತಿ ನಿರಾಕರಿಸಿತ್ತು. ಇದರಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ನಗರ ಮಧ್ಯದಲ್ಲಿ ಆಳವಾದ ಗುಂಡಿ ಅಗೆದು ಬಿಟ್ಟಿರುವುದು ಮಳೆಗಾಲದಲ್ಲಿ ಅಪಾಯವನ್ನು ಆಹ್ವಾನಿಸುವಂತಿದೆ.
ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ ನಿರ್ವಹಣೆ ಜವಾಬ್ದಾರಿಯಿಂದ ಗುತ್ತಿಗೆ ವಹಿಸಿರುವ ಖಾಸಗಿ ಸಂಸ್ಥೆ ಹಿಂದೆ ಸರಿದರೆ ಜಿಲ್ಲಾಡಳಿತ ಸೇವೆಗಳನ್ನು ಮುಂದುವರಿಸಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಾರ ಸರ್ಕಾರಿ ಸಿಬ್ಬಂದಿ ಹಾಗೂ ವೈದ್ಯರನ್ನು ನೇಮಕ ಮಾಡಲು ಕ್ರಮಕೈಗೊಳ್ಳಲಾಗುವುದು.
ಜಿ. ಜಗದೀಶ್, ಜಿಲ್ಲಾಧಿಕಾರಿ, ಉಡುಪಿ
ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಿಸಲು ಕ್ರಮಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ಪ್ರಕಾರ ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಅನಸ್ತೇಶಿಯಾ, ಮೈಕ್ರೋಬಯಾಲಾಜಿ ತಜ್ಞರ ನೇಮಕಕ್ಕೆ ಸಂದರ್ಶನ ನಡೆಸಲಾಗಿದ್ದು, ಎನ್‌ಎಚ್‌ಎಂ ಯೋಜನೆಯಡಿ ಶೀಘ್ರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ಡಾ.ಸುಧೀರಚಂದ್ರ ಸೂಡ, ಡಿಎಚ್‌ಒ, ಉಡುಪಿ
ಆಸ್ಪತ್ರೆಯನ್ನು ಖಾಸಗಿ ಸಂಸ್ಥೆಗೆ ವಹಿಸಿದ ಸಂದರ್ಭದಲ್ಲಿ ಈ ಹಿಂದೆ ಇದ್ದಂತೆ 70 ಬೆಡ್‌ಗಳ ಸರ್ಕಾರಿ ವೈದ್ಯರ ಯುನಿಟ್ ರಚಿಸಬೇಕು ಎಂಬ ಬೇಡಿಕೆ ಸಲ್ಲಿಸಲಾಗಿತ್ತು. ಅಂದಿನ ಸರ್ಕಾರ ಇದನ್ನು ಮಾನ್ಯ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಪ್ರಸಕ್ತ ಆಡಳಿತ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿ ಸರ್ಕಾರವೇ ಆಸ್ಪತ್ರೆ ನಡೆಸುವುದು ಉತ್ತಮ.
- ಕೆ.ರಘುಪತಿ ಭಟ್, ಶಾಸಕ, ಉಡುಪಿ