

ಮಡಿಕೇರಿ: ಕ್ರೀಡಾಕೂಟಗಳಿಂದ ನಾಯಕತ್ವ ಗುಣದೊಂದಿಗೆ ಪರಸ್ಪರ ಸಹೋದರತೆ ಭಾವೆ ಬೆಳೆಯುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹೊಸಮನಿ ಪುಂಡಲೀಕ ಹೇಳಿದರು.
ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗುರುವಾರ ನಡೆದ ಪೊಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸಮಾಜದ ಆರೋಗ್ಯ ಕಾಪಾಡುವುದು ಕಾನೂನಿನ ಉದ್ದೇಶವಾಗಿರುತ್ತದೆ. ಕಾನೂನು ಕಾಪಾಡುತ್ತಲೇ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಕಡೆ ಗಮನ ಹರಿಸುವುದು ಪೊಲೀಸರಿಗೆ ಕಷ್ಟಕರ. ಇಂತಹ ಕಾರ್ಯಕ್ರಮಗಳಿಂದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದ ಅವರು, ಕ್ರೀಡಾಕೂಟಗಳಿಂದ ನಾಯಕತ್ವದ ಬೆಳವಣಿಗೆಯೊಂದಿಗೆ ಸಹೋದರತೆ ಭಾವನೆ ಬೆಳೆಯುತ್ತದೆ. ಎಲ್ಲರೂ ಒಂದೇ ಕುಟುಂಬದಂತೆ ಕೆಲಸ ಮಾಡಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪ್ರತಿವರ್ಷ ಕ್ರೀಡಾಕೂಟ ಹಮ್ಮಿಕೊಂಡು ಬರಲಾಗುತ್ತಿದ್ದು, ಇದರಿಂದಾಗಿ ಒಂದು ತಂಡ ರಚನೆಯೊಂದಿಗೆ ಎಲ್ಲರೂ ಒಂದೇ ಕುಟುಂಬ ಎಂಬಂತೆ ಬೆರೆಯಲು ಸಾಧ್ಯವಾಗುತ್ತದೆ. ದೈಹಿಕ ಸಾಮರ್ಥ್ಯ ವೃದ್ಧಿಯೊಂದಿಗೆ ಇತರರಿಗೂ ಮಾದರಿಯಾಗಿ ಎಲ್ಲರೂ ಪಾಲ್ಗೊಳ್ಳಬೇಕು ಎಂಬ ಆಸಕ್ತಿ ಮೂಡಿಸುತ್ತದೆ ಎಂದರು.
ಒತ್ತಡದ ಕೆಲಸದಲ್ಲಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೂ ಎಂದಿಗೂ ಒಂದಾಗಿ ಬೆರೆಯಲು ಸಾಧ್ಯವೇ ಆಗುವುದಿಲ್ಲ. ಎಲ್ಲರೂ ಪ್ರತಿನಿತ್ಯ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗಿಗಳಾಗುತ್ತಾರೆ. ಹಾಗಾಗಿ ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವ ಮೂಲಕ ಎಲ್ಲರೂ ಒಂದಾಗಿ ಬೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಸೋಲು-ಗೆಲುವು ಜೀವನದ ಒಂದು ಭಾಗವಾಗಿದೆ. ಎಲ್ಲರೂ ಒಂದಾಗಬೇಕು. ಪೊಲೀಸರಿಗೆ ಸಮಸ್ಯೆ ಎದುರಾದಾಗ ಎಲ್ಲರೂ ಒಂದಾಗಬೇಕು. ಕುಟುಂಬದ ರೀತಿಯಲ್ಲಿ ಬೇರೆಯಬೇಕೆಂದು ಕಿವಿಮಾತು ಹೇಳಿದರು.
ಕ್ರೀಡೆಯಲ್ಲಿ ವಿಜೇತರದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರ್‌ರಾಜ್, ಪ್ರೊಬೇಷನರಿ ವರಿಷ್ಠಾಧಿಕಾರಿ ಡಾ.ಬೆನಕ ಪ್ರಸಾದ್, ಡಿವೈಎಸ್‌ಪಿಗಳಾದ ಮಹೇಶ್ ಕುಮಾರ್, ಮೋಹನ್ ಕುಮಾರ್, ಗಂಗಾಧರಪ್ಪ, ರವಿ ಇದ್ದರು.