ಆಸ್ತಿ ವಿವಾದ ತಮ್ಮನ ಹತ್ಯೆಗೆ ಅಣ್ಣನ ಸುಫಾರಿ: ಕೆ.ಎಂ.ದೊಡ್ಡಿ ಪೊಲೀಸರ ಯಶಸ್ವಿ ಕಾರ್ಯಾಚರಣೆ

Brother revenge for his brother murder Mandya
Published on

ಮಂಡ್ಯ: ಮದ್ದೂರು ತಾಲೂಕು ಲಕ್ಷ್ಮೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಬೇದಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಅಂತೆಯೇ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಅಣ್ಣನೇ ಸುಫಾರಿ ಕೊಟ್ಟು ಕೃತ್ಯ ಮಾಡಿಸಿರುವುದು ಬಯಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮಾರಕಾಸದಿಂದ ಹಲ್ಲೆ ನಡೆಸಿ ವ್ಯಕ್ತಿಯನ್ನು ಹತ್ಯೆಗೈದಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ 1 ಲಕ್ಷ ರೂ ವಶಪಡಿಸಿಕೊಳ್ಳಲಾಗಿದೆ. ಲಕ್ಷ್ಮೇಗೌಡನದೊಡ್ಡಿ ಗ್ರಾಮದ ಶಿವನಂಜೇಗೌಡ, ಮಳವಳ್ಳಿ ತಾಲೂಕು ನಿಟ್ಟೂರು ಗ್ರಾಮದ ಎನ್.ಎಸ್.ಚಂದ್ರಶೇಖರ್, ಮದ್ದೂರು ತಾಲೂಕು ಕೊಪ್ಪ ಗ್ರಾಮದ ಬಿ.ಸುನೀಲ್, ಕೆ.ಪಿ.ಉಲ್ಲಾಸ್‌ಗೌಡ, ಆಬಲವಾಡಿ ಗ್ರಾಮದ ಎ.ಎಂ.ಪ್ರತಾಪ, ಕೆ.ಎಂ.ಅಭಿಷೇಕ್, ಕೆ.ಶ್ರೀನಿವಾಸ್, ರಾಮನಗರ ಜಿಲ್ಲೆ ಜಕ್ಕೇಗೌಡನದೊಡ್ಡಿ ಗ್ರಾಮದ ಎಚ್.ಹನುಮೇಗೌಡ ಬಂಧಿತರು ಎಂದು ತಿಳಿಸಿದರು.

ಆರೋಪಿ ಶಿವನಂಜೇಗೌಡ ಲಕ್ಷ್ಮೇಗೌಡನದೊಡ್ಡಿ ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಿಕೊಂಡು ಪೂಜೆ ಮಾಡುತ್ತಿದ್ದರು. ಈತನ ಸಹೋದರ ಕೃಷ್ಣೇಗೌಡ ತುಂಬಾ ಸಾಲ ಮಾಡಿಕೊಂಡಿದ್ದನು. ಇದನ್ನು ಶಿವನಂಜೇಗೌಡ ತೀರಿಸಿದ್ದ. ಆದರೆ ಹಣಕ್ಕೆ ಬದಲಾಗಿ ತಮ್ಮನ ಪಾಲಿನ ಬಂದಿದ್ದ ಜಮೀನನ್ನು ಶಿವನಂಜೇಗೌಡ ತನ್ನ ಪತ್ನಿಯ ಹೆಸರಿಗೆ ಮಾಡಿಕೊಟ್ಟಿದ್ದನು. ಆದಾಗ್ಯೂ ಕೃಷ್ಣೇಗೌಡ ಜಮೀನನ್ನು ಅವರ ವಶಕ್ಕೆ ಬಿಡದೆ ಸ್ವಾಧೀನದಲ್ಲಿದ್ದನು. ಇದಲ್ಲದೆ, ಸಹೋದರಿಯರನ್ನು ಪುಸಲಾಯಿಸಿ ಶಿವಲಿಂಗೇಗೌಡನ ವಿರುದ್ಧ ಜಮೀನು ವಿಚಾರದಲ್ಲಿ ಕೇಸು ಹಾಕಿಸಿದ್ದನು. ಜತೆಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡುತ್ತಿದ್ದರಿಂದ ಶಿವನಂಜೇಗೌಡನಿಗೆ ಬೇಸತ್ತಿದ್ದನು. ಈ ಹಿನ್ನೆಲೆಯಲ್ಲಿ ತಮ್ಮನ ಹತ್ಯೆಗೆ ನಿರ್ಧರಿಸಿದ್ದನು ಎಂದು ವಿವರಿಸಿದರು.

ಅದೇ ರೀತಿ ತನ್ನ ದೇವಸ್ಥಾನಕ್ಕೆ ಆಗಾಗ್ಗೆ ಬಂದು ಹೋಗುತ್ತಿದ್ದ ಚಂದ್ರಶೇಖರನಿಗೆ 5 ಲಕ್ಷ ರೂ.ಗೆ ಸುಫಾರಿ ಕೊಟ್ಟಿದ್ದನು. ಅದರಂತೆ ಚಂದ್ರಶೇಖರ್ ಉಳಿದ ಆರೋಪಿಗಳೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದನು. ಕೊಲೆ ನಡೆಯುವ ಎರಡು ದಿನಗಳ ಮುನ್ನ ಕೃಷ್ಣೇಗೌಡನನ್ನು ಮುಗಿಸಲು ಯತ್ನ ನಡೆಸಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ಆದರೆ ಕೃಷ್ಣೇಗೌಡನ ಚಲನವಲನದ ಬಗ್ಗೆ ಶಿವನಂಜೇಗೌಡನಿಂದ ಸಂಪೂರ್ಣ ಮಾಹಿತಿ ಪಡೆದ ಆರೋಪಿಗಳು, ಫೆ.11ರಂದು ಬೆಳಗ್ಗೆ 6 ಗಂಟೆ ಸಮಯದಲ್ಲಿ ಮದನಹಟ್ಟಿ ದೇವಸ್ಥಾನದ ಪಕ್ಕದಲ್ಲಿರುವ ಜಮೀನಿನ ಬಳಿ ಮಾರಕಾಸ್ತಗಳಿಂದ ಹಲ್ಲೆ ನಡೆಸಿ ಆತನ ಕತ್ತು ಕೊಯ್ದು ಪರಾರಿಯಾಗಿದ್ದರು ಎಂದರು.

ಘಟನೆ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಚಂದ್ರಶೇಖರ್ ಬಗ್ಗೆ ಅನುಮಾನಗೊಂಡ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ ಕೃಷ್ಣೇಗೌಡನ ಹತ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ಬಹಿರಂಗವಾಗಿದೆ. ಅದರಂತೆ ಎಲ್ಲ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ 1 ಲಕ್ಷ ರೂ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ವಿವರಿಸಿದರು.

ತನಿಖಾ ತಂಡದಲ್ಲಿದ್ದ ಮಳವಳ್ಳಿ ಡಿವೈಎಸ್ಪಿ ವಿ.ಕೃಷ್ಣಪ್ಪ, ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಪಿಐ ಆನಂದ್, ಮುಖ್ಯಪೇದೆಗಳಾದ ನಟರಾಜು, ಮಹೇಶ್, ರಾಜಶೇಖರ್, ರಾಜೇಂದ್ರ, ಶ್ರೀಕಾಂತ್, ಪೇದೆಗಳಾದ ವಿಠ್ಠಲ್ ಜೆ.ಕರಿಗಾರ, ಅರುಣ್, ಶ್ರೀಕಾಂತ್, ಅನಿಲ್‌ಕುಮಾರ್, ಕೌಶಿಕ್, ಚಿರಂಜೀವಿ, ವಿಷ್ಣುವರ್ಧನ, ಕಿರಣ್‌ಕುಮಾರ್, ರವಿಕಿರಣ್, ಲೋಕೇಶ್, ವಾಸುದೇವ ಅವರನ್ನು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅಭಿನಂದಿಸಿದರು.

ಅಪರ ಪೊಲೀಸ್ ವರಿಷ್ಠಾಧಿಕಾರಿ-1 ಸಿ.ಇ.ತಿಮ್ಮಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಎಸ್.ಇ.ಗಂಗಾಧರಸ್ವಾಮಿ, ಡಿವೈಎಸ್ಪಿ ವಿ.ಕೃಷ್ಣಪ್ಪ, ಕೆ.ಎಂ.ದೊಡ್ಡಿ ಠಾಣೆ ಇನ್‌ಸ್ಪೆಕ್ಟರ್ ಎಸ್.ಆನಂದ್ ಇತರರಿದ್ದರು.

ಸುಫಾರಿ ಕೊಟ್ಟು ಕುಂಭಮೇಳಕ್ಕೆ ಪಯಣ

ತಮ್ಮನ ಹತ್ಯೆ ಮಾಡಿಸಲೇಬೇಕೆಂದು ನಿರ್ಧಾರ ಮಾಡಿದ್ದ ಶಿವನಂಜೇಗೌಡ, ಇದು ತನ್ನ ಮೇಲೆ ಬರದಂತೆ ಮಾಡಲು ಯೋಜನೆ ಮಾಡಿಕೊಂಡಿದ್ದಾನೆ. ಅದರಂತೆ ಆರೋಪಿಗಳಿಗೆ ಸುಫಾರಿ ಕೊಟ್ಟು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆಂದು ಸ್ನೇಹಿತನೊಟ್ಟಿಗೆ ಫೆ.6ರಂದೇ ಹೋಗಿದ್ದನು. ಆದರೆ ಪೊಲೀಸರ ತನಿಖೆಯಿಂದ ಎಲ್ಲ ಸತ್ಯಾಂಶ ಹೊರಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net