ಮೊಬೈಲ್‌ನಲ್ಲಿ ಯುವತಿಯೊಂದಿಗೆ ಮಾತನಾಡುತ್ತಿದ್ದ ಎನ್ನುವ ನೆಪ
ಅಣ್ಣನ ಬಂಧನ
ಮಂಗಳೂರು: ಮೊಬೈಲ್‌ನಲ್ಲಿ ಯುವತಿಯೊಂದಿಗೆ ಮಾತನಾಡುತ್ತಿದ್ದಾನೆ ಎನ್ನುವ ಕ್ಷುಲ್ಲಕ ಕಾರಣಕ್ಕೆ ತನ್ನ ತಮ್ಮನನ್ನೇ ಕೊಡಲಿಯೊಂದರಿಂದ ಕೊಚ್ಚಿ ಕೊಲೆಗೈದ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟುವಿನ ಕೃಷ್ಣಾಪುರ ಮಠದ ಸಮೀಪ ಜು. 19ರ ರಾತ್ರಿ ಸಂಭವಿಸಿದೆ.
ಮೃತನನ್ನು ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಗಯಾಳ ಗ್ರಾಮದ ನಿವಾಸಿ ಮಲ್ಲಿಕಾರ್ಜುನ (20) ಎಂದು ಗುರುತಿಸಲಾಗಿದೆ. ಮೃತನ ಅಣ್ಣ ಸೋಮನಾಥ (21)ನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಆತ ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಘಟನೆ ಹಿನ್ನೆಲೆ
ಜು. 19ರ ರಾತ್ರಿ 11 ಗಂಟೆಯ ಸುಮಾರಿಗೆ ಮಲ್ಲಿಕಾರ್ಜುನ ಯಾವುದೋ ಯುವತಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ. ಇದಕ್ಕೆ ಅಣ್ಣ ಸೋಮನಾಥ ವಿರೋಧ ವ್ಯಕ್ತಪಡಿಸಿದ್ದ. ಈ ವೇಳೆ ಮಾತಿಗೆ ಮಾತು ಬೆಳೆಯಿತು. ಮಲ್ಲಿಕಾರ್ಜುನ ಉಡಾಫೆಯಾಗಿ ಮಾತನಾಡಿದ್ದ. ಇದರಿಂದ ಕೋಪಗೊಂಡ ಸೋಮನಾಥ ಅಲ್ಲೇ ಇದ್ದ ಕೊಡಲಿಯಿಂದ ತಲೆ ಹಾಗೂ ಮುಖಕ್ಕೆ ಬಲವಾಗಿ ಹೊಡೆದಿದ್ದ. ಕುಸಿದು ಬಿದ್ದ ಮಲ್ಲಿಕಾರ್ಜುನ ಮೃತಪಟ್ಟಿದ್ದ. ಗಾಬರಿಗೊಂಡ ಸೋಮನಾಥ ಸ್ಥಳದಿಂದ ಪರಾರಿಯಾಗಿದ್ದ. ಹೆಚ್ಚು ದೂರ ಹೋಗಲಾಗದೆ ಆತ ಸಮೀಪದ ಪೊದೆಯಲ್ಲಿ ಅವಿತುಕೊಂಡಿದ್ದ. ಸೋಮವಾರ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಈತ ಪತ್ತೆಯಾಗಿದ್ದ. ಅಲ್ಲಿಂದಲೇ ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ತಾಯಿ ಊರಿಗೆ ಹೋಗಿದ್ದರು
ಉದ್ಯೋಗ ನಿಮಿತ್ತ ಮಂಗಳೂರಿಗೆ ಬಂದಿದ್ದ ಅವರು ಚೊಕ್ಕಬೆಟ್ಟು ಮಠದ ಸಮೀಪ ರೇಖಾ ಅವರ ಬಾಡಿಗೆ ಮನೆಯಲ್ಲಿ ಕಳೆದೈದು ವರ್ಷದಿಂದ ವಾಸವಿದ್ದರು. ತಾಯಿ ಶಿವಲೀಲಾ ಅವರು ಇತ್ತೀಚೆಗೆ ಕೊಪ್ಪಳಕ್ಕೆ ಹೋಗಿದ್ದರು. ಸಹೋದರರು ಕೂಲಿ ಕೆಲಸ ಮಾಡುತ್ತಿದ್ದರು.
ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಎಚ್.ಎನ್., ಪಣಂಬೂರು ಉಪವಿಭಾಗದ ಎಸಿಪಿ ಶ್ರೀಕಾಂತ್, ಸುರತ್ಕಲ್ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್, ಶ್ವಾನದಳ, ಬೆರಳಚ್ಚು ತಜ್ಞರು, ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.