ಆಸ್ತಿಗಾಗಿ ಮಚ್ಚಿನಿಂದ ಕೊಚ್ಚಿ ಅಣ್ಣನನ್ನು ಕೊಂದ ತಮ್ಮ

Crime Logo
Published on

ಮೈಸೂರು: ಆಸ್ತಿ ವಿಚಾರವಾಗಿ ನಡೆದ ಕಲಹದಲ್ಲಿ ತಮ್ಮನೇ ಅಣ್ಣನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಅಲ್ಲದೇ ಅತ್ತಿಗೆ ಹಾಗೂ ತಂದೆಯ ಮೇಲೂ ಹಲ್ಲೆ ಮಾಡಿದ್ದು, ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೈಸೂರು ತಾಲೂಕು ಬೊರೆ ಆನಂದೂರಿನ ಮಹೇಶ್ (45) ಕೊಲೆಯಾದವರು. ಅತ್ತಿಗೆ ಲಕ್ಷ್ಮಿ, ತಂದೆ ಕೃಷ್ಣೇಗೌಡ ಗಾಯಗೊಂಡವರು. ಮಹೇಶ್ ತಮ್ಮ ರವಿ (42) ಕೊಲೆ ಮಾಡಿದ ಆರೋಪಿಯಾಗಿದ್ದು, ಆತನನ್ನು ಇಲವಾಲ ಪೊಲೀಸರು ಬಂಧಿಸಿದ್ದಾರೆ.

ಮಹೇಶ್ ಹಾಗೂ ರವಿ ತಂದೆಯಾದ ಕೃಷ್ಣೇಗೌಡ ಅವರು ಸ್ವಯಾರ್ಜಿತವಾಗಿ ಜಮೀನು ಮಾಡಿದ್ದು, ಅದನ್ನು ಇಬ್ಬರು ಮಕ್ಕಳಿಗೂ ಹಂಚಿಕೆ ಮಾಡಿದ್ದರು. ಉಳಿದ 6 ಗುಂಟೆ ಜಾಗವನ್ನು ತಮ್ಮಲ್ಲಿಯೇ ಇಟ್ಟುಕೊಂಡಿದ್ದರು.

ಓಮ್ನಿ ವ್ಯಾನ್ ಚಾಲಕ ವೃತ್ತಿ ಮಾಡುತ್ತಿದ್ದ ರವಿ, ಆನ್‌ಲೈನ್ ಜೂಜಾಟದ ಚಟಕ್ಕೆ ಬಿದ್ದಿದ್ದು, ಹಲವರಿಂದ ಕೈ ಸಾಲ ಮಾಡಿದ್ದನೆನ್ನಲಾಗಿದೆ. ಈತನಿಗೆ ಇಬ್ಬರು ಮಕ್ಕಳಿದ್ದು, ಕುಟುಂಬ ನಿರ್ವಹಣೆಗೆ ಕಷ್ಟವಾದಾಗ ತಂದೆ ಬಳಿ ಇದ್ದ 6 ಗುಂಟೆ ಜಮೀನು ಮಾರಿ ಸಾಲ ತೀರಿಸಲು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಕಿರಿಯ ಮಗ ರವಿಯ ವರ್ತನೆಯನ್ನು ಕಂಡಿದ್ದ ತಂದೆ ಕೃಷ್ಣೇಗೌಡ, ಹಿರಿಯ ಮಗ ಮಹೇಶ್‌ಗೆ ಕೃಷಿ ಮಾಡಲು ಆ ಜಮೀನನ್ನು ಬಿಟ್ಟುಕೊಟ್ಟಿದ್ದು, ಈತನನ್ನು ಕೆರಳುವಂತೆ ಮಾಡಿತ್ತು.

ಹೀಗಾಗಿ ಸಾಲ ತೀರಿಸಲು ಅಗದೆ ತೊಂದರೆ ಹೆಚ್ಚಾದಾಗ ಪದೇ ಪದೆ ಜಮೀನನ್ನು ನನ್ನ ಹೆಸರಿಗೆ ಬರೆದುಕೊಡುವಂತೆ ಗಲಾಟೆ ಮಾಡುತ್ತಿದ್ದ. ಸೋಮವಾರ ಮಧ್ಯಾಹ್ನ ಜಮೀನು ಬರೆದುಕೊಡುವಂತೆ ಮನೆಯಲ್ಲಿದ್ದ ತಂದೆ ಜತೆ ಜಗಳ ತೆಗೆದು ಹಲ್ಲೆ ನಡೆಸಿ ತೋಟದ ಮನೆಯಲ್ಲಿದ್ದ ಅಣ್ಣನನ್ನು ಹುಡುಕಿ ಹೋಗುತ್ತಿದ್ದಾಗ ದಾರಿಯಲ್ಲಿ ಸಿಕ್ಕ ಅತ್ತಿಗೆ ಲಕ್ಷ್ಮೀ ಮೇಲೂ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.

ಅಲ್ಲಿಂದ ತೋಟದ ಮನೆಯಲ್ಲಿದ್ದ ಅಣ್ಣ ಮಹೇಶ್‌ನ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಿರುವ ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net