ಬಾಮೈದುನನಿಂದಲೇ ಭಾವನ ಕೊಲೆ

ಮುರಳಿ(35)
ಮುರಳಿ(35)
Published on

ತಿ.ನರಸೀಪುರ: ನಿತ್ಯ ಕುಡಿದು ಬಂದು ಮನೆಯಲ್ಲಿ ಅಕ್ಕನೊಂದಿಗೆ ಜಗಳವಾಡಿ ಹಿಂಸೆ ನೀಡುತ್ತಿದ್ದ ಎಂಬ ಕಾರಣಕ್ಕಾಗಿ ತಾಲೂಕಿನ ಚಂದಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಬಾಮೈದುನ ತನ್ನ ಇಬ್ಬರು ಸ್ನೇಹಿತರ ಜತೆಗೂಡಿ ಭಾವನನ್ನು ಕೊಲೆ ಮಾಡಿದ್ದಾನೆ.

ಗ್ರಾಮದ ನಿವಾಸಿ ಮುರಳಿ(35) ಹತ್ಯೆಗೀಡಾದವರು. ಆಟೋ ಚಾಲಕನಾಗಿದ್ದ ಮುರಳಿಗೆ ಮಾಡ್ರಹಳ್ಳಿ ಗ್ರಾಮದ ಸಿಂಧು ಎಂಬಾಕೆಯೊಂದಿಗೆ ವಿವಾಹವಾಗಿದ್ದು, ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದರು. ಮುರಳಿ ಕುಡಿದು ಬಂದು ಪತ್ನಿಯೊಂದಿಗೆ ಗಲಾಟೆ ಮಾಡಿ ಹಲ್ಲೆ ಮಾಡುತ್ತಿದ್ದ. ಈ ಸಂಬಂಧ ಗ್ರಾಮದ ಯಜಮಾನರು ನ್ಯಾಯ ಪಂಚಾಯಿತಿ ಮಾಡಿ ಬುದ್ಧಿವಾದ ಹೇಳಿದ್ದರೂ ಆತ ಮತ್ತೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.

ಇದರಿಂದ ಬೇಸತ್ತ ಪತ್ನಿ ಸಿಂಧು ತಲಕಾಡು ಠಾಣೆಗೆ ದೂರು ನೀಡಿ, ತವರು ಮನೆಯಲ್ಲಿದ್ದರು ಎನ್ನಲಾಗಿದೆ. ಈ ನಡುವೆ ಅತ್ತೆ ರೇವಮ್ಮ ಮಾಡ್ರಹಳ್ಳಿಗೆ ಮಗನೊಂದಿಗೆ ಹೋಗಿ ಸಿಂಧುವನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿ ಮನೆಗೆ ಕರೆತಂದಿದ್ದಾರೆ. ಇದಾದ ಬಳಿಕವೂ ಮುರಳಿ ತನ್ನ ಹಳೇ ಚಾಳಿ ಮುಂದುವರಿಸಿದ್ದ. ಈತನ್ಮಧ್ಯೆ ಆಸ್ಪತ್ರೆಗೆಂದು ಬಂದಿದ್ದ ಪತ್ನಿಯೊಂದಿಗೆ ಪತಿ ಗಲಾಟೆ ಮಾಡಿದ್ದು, ಈ ಸಂಬಂಧ ಆಕೆ ತಿ.ನರಸೀಪುರ ಹಾಗೂ ಮೈಸೂರು ಮಹಿಳಾ ಠಾಣೆಗೆ ದೂರು ನೀಡಿದ್ದರು. ನಂತರ ಠಾಣೆಯಲ್ಲಿ ಪೊಲೀಸರು ಬುದ್ಧಿವಾದ ಹೇಳಿ ಕಳುಹಿಸಿದ್ದರು.

ಇದರಿಂದ ಕುಪಿತನಾಗಿದ್ದ ಮುರಳಿ ಮನೆಯಲ್ಲಿ ಪತ್ನಿ ಹಾಗೂ ತನ್ನ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ತಲಕಾಡು ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ. ಬಳಿಕ ಸಿಂಧು ತನ್ನ ತಮ್ಮ ಶ್ರೀನಿವಾಸನಿಗೆ ದೂರವಾಣಿ ಕರೆ ಮಾಡಿ ತನಗಾಗಿರುವ ತೊಂದರೆ ಬಗ್ಗೆ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಶ್ರೀನಿವಾಸ ತನ್ನ ಇಬ್ಬರು ಸ್ನೇಹಿತರೊಂದಿಗೆ ಭಾವನ ಮನೆಗೆ ಬಂದು ಪಾತ್ರೆಯಿಂದ ಹೊಡೆದು ಮುರಳಿಯನ್ನು ಕೊಲೆ ಮಾಡಿ ಮೋರಿಗೆ ಹಾಕಿದ್ದಾರೆ ಎಂದು ಮೃತನ ತಾಯಿ ರೇವಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ತಲಕಾಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಶ್ರೀನಿವಾಸ ಹಾಗೂ ಆತನ ಇಬ್ಬರು ಸ್ನೇಹಿತರು ತಲೆಮರೆಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net