ಹಿಟ್ಟಿನಹಳ್ಳಿಯಲ್ಲಿ ಕಂಚಿನ ಪುತ್ಥಳಿ ಅನಾವರಣ, ರಾಷ್ಟ್ರ ನಾಯಕರನ್ನು ನಿತ್ಯ ಸ್ಮರಿಸೋಣ ಎಂದ ಸುನೀಲಗೌಡ ಪಾಟೀಲ

HITNALLI PUTTHALI ANAVARANA
ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಉದ್ಘಾಟಿಸಿದರು. ಶಾಸಕ ವಿಠಲ ಕಟಕದೋಂಡ, ಪ್ರಭು ಮಹಾಸ್ವಾಮೀಜಿ, ಸಿದ್ಧ ರಮಾನಂದ ಸ್ವಾಮೀಜಿ ಮತ್ತಿತರರಿದ್ದಾರೆ.
Published on

ವಿಜಯಪುರ: ಪುತ್ಥಳಿ ಮತ್ತು ವೃತ್ತ ನಿರ್ಮಾಣ ಹಾಗೂ ಪ್ರಮುಖ ಸ್ಥಳಗಳಿಗೆ ಮಹನೀಯರ ಹೆಸರುಗಳನ್ನು ನಾಮಕರಣ ಮಾಡುವುದರಿಂದ ರಾಷ್ಟ್ರ ನಾಯಕರು ದೇಶ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದಲ್ಲಿ ಶನಿವಾರ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ದೇಶ ಮತ್ತು ಸಮಾಜಕ್ಕಾಗಿ ಹೋರಾಟ ನಡೆಸಿದ ರಾಷ್ಟ್ರ ನಾಯಕರ ಕಾರ್ಯಗಳನ್ನು ಸ್ಮರಿಸಲು ಪುತ್ಥಳಿ ಅನಾವರಣ ಮತ್ತು ರಾಷ್ಟ್ರ ನಾಯಕರ ಹೆಸರುಗಳನ್ನು ನಾನಾ ಸ್ಥಳಗಳಿಗೆ ನಾಮಕರಣ ಮಾಡುತ್ತಿರುವುದು ಉತ್ತಮ ಸಂಪ್ರದಾಯವಾಗಿದೆ. ಹಿಟ್ಟಿನಹಳ್ಳಿ ಗ್ರಾಮದಲ್ಲಿ ಶಿವಾಜಿ ಮಹಾರಾಜರು ಮತ್ತು ಸಂಗೊಳ್ಳಿ ರಾಯಣ್ಣರ ಕಂಚಿನ ಪುತ್ಥಳಿ ಅನಾವರಣ ಮಾಡಲಾಗಿದೆ. ಸಚಿವ ಎಂ.ಬಿ. ಪಾಟೀಲ ಅವರ ಪ್ರಯತ್ನದಿಂದಾಗಿ ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ವೀರ ರಾಣಿ ಕಿತ್ತೂರ ಚೆನ್ನಮ್ಮ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಈ ರೀತಿ ರಾಷ್ಟ್ರ ನಾಯಕರ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲರ ಜವಾಬ್ದಾರಿಯಾಗಿದೆ ಎಂದರು.

ರಾಷ್ಟ್ರ ನಾಯಕರ ಸ್ಮರಣೆ ಮತ್ತು ದೇಶ ಹಾಗೂ ಸಮಾಜಕ್ಕಾಗಿ ಅವರು ನೀಡಿರುವ ಕೊಡುಗೆಗಳ ಬಗ್ಗೆ ಜನ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ಸಚಿವ ಎಂ.ಬಿ. ಪಾಟೀಲ ಅವರು ಮುಂಚೆಯಿಂದಲೂ ಛತ್ರಪತಿ ಶಿವಾಜಿ ಮಹಾರಾಜರು, ವೀರ ರಾಣಿ ಕಿತ್ತೂರ ಚೆನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್, ಕನಕದಾಸರು, ಭಗೀರಥ, ಸಂತ ಸೇವಾಲಾಲ ಸೇರಿದಂತೆ ಅನೇಕ ಮಹನೀಯರ ಪುತ್ಥಳಿಗಾಗಿ ನೆರವು ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಬಾಗಲಕೋಟೆ-ಹಿಟ್ಟಿನಹಳ್ಳಿ ಚರಂತಿಮಠದ ಪ್ರಭು ಮಹಾಸ್ವಾಮೀಜಿ, ತಿಂಥಣಿ ಬ್ರಿಡ್ಜ್ ಕನಕಗುರು ಪೀಠ ಶಾಖಾ ಮಠದ ಸಿದ್ಧ ರಮಾನಂದ ಸ್ವಾಮೀಜಿ, ಕಿರಣ ಜೋಶಿ(ರಾಮಭಟ್ಟ), ನಾಗಠಾಣ ಶಾಸಕ ವಿಠಲ ಕಟಕದೊಂಡ, ಮುಖಂಡರಾದ ರವಿ ಕಡಿಮನಿ, ಸದಾಶಿವ ಪವಾರ, ಸುಧಾಕರ ಘಾಟಗೆ, ಎಲ್.ಎಲ್. ಉಸ್ತಾದ, ಸೋಮನಾಥ ಕಳ್ಳಿಮನಿ, ಹಾಸಿಂಪೀರ ವಾಲಿಕಾರ, ಜ್ಯೋತಿರಾಮ ಪವಾರ, ವೈದ್ಯ ಡಾ. ಗೌತಮ ವಗ್ಗರ, ಮಂಜುನಾಥ ಜುನಗೊಂಡ, ರತ್ನಾಬಾಯಿ ಶಿ.ಮುದೂರ, ಜಗದೀಶ ಚೌಧರಿ, ಮಹೇಶ ಹೊಸಗೌಡರ, ಬಾಬುರಾವ ತರಸೆ, ಬಿ.ಜಿ. ಶಿವಾಳಕರ, ವಿಜಯಕುಮಾರ ಚವಾಣ್, ಸುಧಾಕರ ಘಾಟಗೆ, ಜ್ಯೋತಿಬಾ ಚವಾಣ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net