

ಚಿಕ್ಕಮಗಳೂರು: ದಲ್ಲಾಳಿಗಳ ಬಂಧನದಿಂದ ರೈತರು ಹೊರಬರಬಾರದು ಎಂಬ ದುರುದ್ದೇಶದಿಂದ ಚೈನಾ ಮಾನಸಿಕತೆಯ ಕೆಲ ಎಡಬಿಡಂಗಿ ಎಡಪಂಥಿಯರು ಸೇರಿ ಹಲವರ ಷಡ್ಯಂತ್ರದ ಅರಾಜಕತೆ ಭಾಗವೆ ದೇಶದಲ್ಲಿ ರೈತರ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.
ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರಿಗೆ ಅನುಕೂಲ ಮಾಡುವ ಪ್ರಯತ್ನಗಳ ಬಗ್ಗೆ ತಪ್ಪು ಅಭಿಪ್ರಾಯ ರೂಪಿಸುವ ಷಡ್ಯಂತ್ರ ನಡೆದಿದೆ. ದಲ್ಲಾಳಿಗಳ ಕಪಿಮುಷ್ಠಿಯಲ್ಲಿ ನಲುಗಿರುವ ರೈತರನ್ನು ಬಿಡುಗಡೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನಕ್ಕೆ ಅಡ್ಡಿ ಮಾಡಿ ರೈತರು ದಲ್ಲಾಳಿಗಳ ಕಪಿಮುಷ್ಠಿಯಲ್ಲೇ ಇರುವಂತೆ ನೋಡಿಕೊಳ್ಳುವ ಷಡ್ಯಂತ್ರ ನಡೆದಿದೆ ಎಂದರು.
ನಿಜವಾದ ಅನ್ನದಾತರು ರೈತರಿಗೆ ಅನುಕೂಲವಾಗುವ, ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರುವ ಪ್ರಯತ್ನ ಮಾಡುತ್ತಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನಂಬಿಕೆಯಿಟ್ಟು ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಯಾರಿಗೆ ಅಸಹನೆ ಇದೆಯೋ ಅವರು ಮಾತ್ರ ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಕಾಯ್ದೆಯಲ್ಲಿರುವ ರೈತ ವಿರೋಧಿ ಅಂಶಗಳ ಬಗ್ಗೆ ಹೇಳಿ ಎಂದು ಹತ್ತಾರು ಬಾರಿ ಮಾತುಕತೆಗೆ ಕರೆದಾಗಲೂ ಹೋರಾಟದಿಂದ ಹಿಂದೆ ಸರಿಯದಿರುವ ದುರುದ್ದೇಶವೇ ದಲ್ಲಾಳಿಗಳ ಬಿಗಿಮುಷ್ಠಿಯಲ್ಲಿ ರೈತರಿರಬೇಕೆಂಬುದು ಸ್ಪಷ್ಟವಾಗುತ್ತದೆ ಎಂದರು.