

ಮಡಿಕೇರಿ:
ಜಿಲ್ಲೆಯ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಸರ್ಕಾರಿ ಇಲಾಖೆಗಳಲ್ಲಿ ದಲ್ಲಾಳಿಗಳ ಹಾವಳಿ ಮಿತಿಮೀರಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿದೆ. ಜನಸಾಮಾನ್ಯರು ನೇರವಾಗಿ ಹೋದರೆ ಯಾವುದೇ ಕೆಲಸ ಇಲ್ಲಿ ಆಗುತ್ತಿಲ್ಲ. ಸಣ್ಣ ಪುಟ್ಟ ಕೆಲಸಗಳಿಗೂ ಅಲೆದಾಡಿಸಲಾಗುತ್ತದೆ. ಎಲ್ಲಾ ಇಲಾಖೆಗಳಲ್ಲೂ ದಲ್ಲಾಳಿಗಳ ಜತೆ ಬಹುತೇಕ ಸಿಬ್ಬಂದಿ ಕೈ ಜೋಡಿಸಿರುವುದರಿಂದಲೇ ಇಂಥ ಪರಿಸ್ಥಿತಿ ಬಂದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗದಿರುವ ಬಗ್ಗೆ ಸಾರ್ವಜನಿಕರು ಅಸಹಾಯಕತೆ ತೋಡಿಕೊಂಡಿದ್ದಾರೆ.
ಬಹುತೇಕ ಇಲಾಖೆಗಳಲ್ಲಿ ಯಾವುದಾದರೂ ಕೆಲಸದ ಮೇಲೆ ತೆರಳಿದವರು ಕಹಿ ಅನುಭವದೊಂದಿಗೆ ವಾಪಸಾಗುವುದು ಸಾಮಾನ್ಯವಾಗಿದೆ. ಸಲೀಸಾಗಿ ಆಗುವ ಕೆಲಸಗಳಿಗೂ ಅಲೆದಾಡಿಸಲಾಗುತ್ತದೆ ಎಂದು ಸಾರ್ವಜನಿಕರು ದೂರಿಕೊಂಡಿದ್ದಾರೆ. ಯಾವುದೇ ಇಲಾಖೆಯಲ್ಲಿ ಯಾವ ಕೆಲಸಕ್ಕೆ ಹೋದರೂ 'ಸರ್ವರ್ ಸರಿ ಇಲ್ಲ' ಎನ್ನುವ ಸಿದ್ಧ ಉತ್ತರ ಇಲ್ಲಿಯ ಸಿಬ್ಬಂದಿಯಿAದ ಬರುವುದು ಸಾಮಾನ್ಯ. ಎಲ್ಲ ಸರಿಯಿದ್ದರೆ ಸಂಬAಧಿಸಿದ ಕಡತ ಮುಂದಕ್ಕೆ ಕಳಿಸುವ ಅಧಿಕಾರಿ ಸಿಗುವುದಿಲ್ಲ. ಕೆಲವು ಕಡತಗಳನ್ನು ತಿಂಗಳುಗಟ್ಟಲೆ ಇಟ್ಟುಕೊಂಡು ಆಟವಾಡಿಸಲಾಗುತ್ತದೆ ಎನ್ನುವ ಆರೋಪವೂ ಇದೆ.
ಕೆಲವು ಕಚೇರಿಗಳಲ್ಲಿ ಸಿಬ್ಬಂದಿಯೇ ಮಧ್ಯವರ್ತಿಗಳನ್ನು ಸೂಚಿಸಿ ಇಂಥವರ ಮೂಲಕ ಬಂದರೆ ಕೆಲಸ ಬೇಗ ಆಗುತ್ತದೆ ಎಂದು ಮಧ್ಯವರ್ತಿಗಳ ಕಾರ್ಯವನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಕೂಡ ಆಪಾದನೆಗಳಿವೆ. ಒಟ್ಟಾರೆಯಾಗಿ ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಕAದಾಯ ಇಲಾಖೇಲಿ ಹೆಚ್ಚು
೧. ಕಂದಾಯ ಇಲಾಖೆಯಲ್ಲೇ ಹೆಚ್ಚಿನ ಮಧ್ಯವರ್ತಿಗಳಿದ್ದಾರೆ. ಸಿಬ್ಬಂದಿ ಜತೆ ಇವರ ವ್ಯವಹಾರ. ಮಧ್ಯವರ್ತಿಗಳ ಮೂಲಕ ಹೋದರೆ ಬೇಗ ಕೆಲಸವಾಗುತ್ತದೆ ಎಂಬುದು ಕಟುಸತ್ಯ. ಅಂತಹ ವೇದಿಕೆಯನ್ನು ಸಿಬ್ಬಂದಿಯೇ ಸೃಷ್ಟಿ ಮಾಡಿದ್ದಾರೆ. ಹಣವಿಲ್ಲದ ರೈತರ ಕೆಲಸಗಳು ಆಗುತ್ತಿಲ್ಲ. ಕೆಲ ಸಿಬ್ಬಂದಿ ಯಾರಿಗೂ ಹೆದರುತ್ತಿಲ್ಲ. ವಿದ್ಯಾವಂತರೇ ಭ್ರಷ್ಟರು ಎಂಬುದೇ ದೇಶದ ದುರಂತ.
ಎಚ್.ಬಿ. ಸೋಮಪ್ಪ, ಕಾರ್ಮಿಕ ನಾಯಕ, ಕುಂಬೂರು ಗ್ರಾಮ
ಕೆಲ ರಾಜಕೀಯ ಪಕ್ಷಗಳ ಕೆಲ ಕಾರ್ಯಕರ್ತರೇ ಬ್ರೋಕರ್‌ಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳನ್ನು ಬೆದರಿಸಿ ಕೆಲಸ ಮಾಡಿಸುವಷ್ಟರ ಮಟ್ಟಿಗೆ ಬ್ರೋಕರ್‌ಗಳು ಬೆಳೆದುಬಿಟ್ಟಿದ್ದಾರೆ. ಹೇಳಿದ ಕೆಲಸ ಮಾಡದಿದ್ದರೆ ವರ್ಗಾವಣೆ ಮಾಡಿಸುವ ಮಟ್ಟಕ್ಕೂ ಬೆಳೆದಿದ್ದಾರೆ. ಗ್ರಾಮೀಣ ಭಾಗದಲ್ಲಿ ರೈತರಿಗೆ ಇವತ್ತಿಗೂ ಆಸ್ತಿಗಳ ಹಕ್ಕುಪತ್ರಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಬ್ರೋಕರ್‌ಗಳಿಂದಲೇ ಕೆಲ ಸಿಬ್ಬಂದಿ, ಕೆಲ ಅಧಿಕಾರಿಗಳು ಲಂಚಕೋರರಾಗಿದ್ದಾರೆ.
ಎಸ್.ಪಿ. ಪೊನ್ನಪ್ಪ, ಅಧ್ಯಕ್ಷ, ಜಿಲ್ಲಾ ಕೃಷಿಕರ ಸಮಾಜ
ವಾಣಿಜ್ಯ ನಗರಿ ಹೆಗ್ಗಳಿಕೆಯ ಕುಶಾಲನಗರದಲ್ಲಿ ಪುರಸಭೆಯ ಕೆಲವು ಸದಸ್ಯರು ಕೂಡ ಮಧ್ಯವರ್ತಿಗಳ ಮೂಲಕವೇ ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ಕುಶಾಲನಗರ ಪುರಸಭೆಯಲ್ಲಿ ನಿರ್ಮಾಣ ಆಗಿದೆ. ಅಧಿಕಾರಿಗಳು, ಸಿಬ್ಬಂದಿ, ಪುರಸಭೆಯ ಕೆಲಸ ಸದಸ್ಯರು ಮಧ್ಯವರ್ತಿಗಳ ಜತೆ ನೇರಾನೇರ ಶಾಮೀಲಾಗಿದ್ದಾರೆ. ಇವರನ್ನು ಪ್ರಶ್ನೆ ಮಾಡಲು ಆಡಳಿತ ಪಕ್ಷದವರು, ವಿರೋಧ ಪಕ್ಷದವರು ಹಾಗೂ ಜನಪ್ರತಿನಿಧಿಗಳು ಆಸಕ್ತಿ ತೋರಿಸದಿರುವುದೇ ಈ ಪರಿಸ್ಥಿತಿಗೆ ಕಾರಣ.
ಕೆ.ಜಿ. ಮನು, ಅಧ್ಯಕ್ಷ, ಅಳಿಲು ಸೇವೆ ಸಂಘಟನೆ, ಕುಶಾಲನಗರ
ಕುಶಾಲನಗರ ಪುರಸಭೆ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮಿರಿದೆ. ಅಧಿಕಾರಿಗಳ ಜೀವನ ನಡೆಯುತ್ತಿರುವುದೇ ಮಧ್ಯವರ್ತಿಗಳಿಂದ ಎನ್ನುವಂತಾಗಿದೆ. ಆದರೂ ಈ ವ್ಯವಸ್ಥೆಗೆ ಕಡಿವಾಣ ಯಾವಾಗ ಎನ್ನುವುದು ಜನಸಾಮಾನ್ಯರನ್ನು ಯಕ್ಷಪ್ರಶ್ನೆಯಾಗಿ ಕಾಡುತ್ತಲೇ ಇದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರೇ ಇದಕ್ಕೆಲ್ಲಾ ಸೂಕ್ತ ಉತ್ತರ ಕೊಡುವ ಕಾಲ ಬರಲಿದೆ.
ಸಿ.ಎಂ. ಆಸೀಫ್, ಗ್ರಾ.ಪಂ. ಮಾಜಿ ಸದಸ್ಯ, ಮುಳ್ಳುಸೋಗೆ
ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಮಾತ್ರವಲ್ಲ ಸರ್ಕಾರದ ಹೆಚ್ಚಿನ ಇಲಾಖೆಗಳಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ಸಾರ್ವಜನಿಕರು ನೇರವಾಗಿ ಹೋದರೆ ಕೆಲಸಗಳು ತೀರ ವಿಳಂಭವಾಗುವುದು ಸಾಮಾನ್ಯ. ಇಂಥ ಇಲಾಖೆಗಳಲ್ಲಿ ಬೇರೆ ಬೇರೆ ಕಾರಣಗಳನ್ನು ನೀಡಿ ದಿನದೂಡುವುದು ಜನಸಾಮಾನ್ಯರ ಪಾಲಿಗೆ ನಿತ್ಯ ಗೋಳು. ಅದೇ ಕೆಲಸ ಮಧ್ಯವರ್ತಿಗಳ ಮೂಲಕ ಹೋದರೆ ಕಡಿಮೆ ಅವಧಿಯಲ್ಲಿ ಯಾವುದೇ ಸಮಸ್ಯೆ ಇಲ್ಲದಂತೆ ಮಾಡಿ ಕೊಡುತ್ತಾರೆ.
ವಿಕಾಸ್, ಸುಣ್ಣದ ಬೀದಿ, ವಿರಾಜಪೇಟೆ
ಇತ್ತೀಚೆಗೆ ಯಾವುದೇ ಸರ್ಕಾರಿ ಕೆಲಸಗಳು ತ್ವರಿತಗತಿಯಲ್ಲಿ ಆಗುತ್ತಿಲ್ಲ. ಒಂದು ಕಡೆ ಸರ್ವರ್ ಸರಿಯಿಲ್ಲ ಎನ್ನುವ ನೆಪ. ಮತ್ತೊಂದು ಕಡೆ ದಲ್ಲಾಳಿಗಳ ಹಾವಳಿ. ನೇರವಾಗಿ ಹೋದರೆ ಕೆಲಸ ಆಗುವುದು ಅನುಮಾನ. ಇವರನ್ನೇ ಅವಲಂಭಿಸಬೇಕೆನ್ನುವ ಪರಿಸ್ಥಿತಿ ಇದೆ. ಬಡವರ್ಗದವರು ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿಸಿಕೊಳ್ಳಲು ಹರಸಾಹಸ ಪಡಬೇಕಿದೆ. ಕೂಡಲೇ ಜಿಲ್ಲಾಡಳಿತ ಇಂತಹ ಮಧ್ಯವರ್ತಿಗಳಿಗೆ ಕಡಿವಾಣ ಹಾಕಬೇಕಿದೆ.
ಆರ್. ಸುಭೀಶ್, ಸಾಮಾಜಿಕ ಕಾರ್ಯಕರ್ತ, ಗೋಣಿಕೊಪ್ಪಲು
ಅಧಿಕಾರಿಗಳು ಮಧ್ಯವರ್ತಿಗಳನ್ನು ದೂರವಿಟ್ಟು ಜನಸಾಮಾನ್ಯರು, ರೈತರ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಿಕೊಡಬೇಕು. ಅದಿಕಾರಿಗಳ ನಿರ್ಲಕ್ಷö್ಯಕ್ಕೆ ಜನಸಾಮಾನ್ಯರು ಮಧ್ಯವರ್ತಿಗಳ ಮೊರೆ ಹೋಗುತ್ತಿದಾರೆ. ಇನ್ನಾದರೂ ಅದಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ನೇರವಾಗಿ ಕಚೇರಿಗೆ ಹೋಗಿ ಆಗದ ಕೆಲಸಗಳು ಮಧ್ಯವರ್ತಿಗಳ ಮೂಲಕ ಬೇಗ ಆಗುತ್ತಿದೆ. ಇದರಿಂದ ಜನರಿಗೆ ಭಾರ ಆದರು ಸಹ ಮಧ್ಯವರ್ತಿಗಳ ಮೂಲಕ ಜನರು ಸರ್ಕಾರದ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.
ಅಶ್ವತ್ಥ್ ಬೆಂಬಳೂರು, ಸಾಮಾಜಿ ಹೋರಾಟಗಾರ
ಸರ್ಕಾರಿ ಕಚೇರಿಗಳಾದ ಕಂದಾಯ ಇಲಾಖೆ, ತಾಲೂಕು ಕಚೇರಿಗಳಲ್ಲಿ ಮಾತ್ರವಲ್ಲದೆ ಕೆಲವೊಂದು ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳಿರುವದರಿಂದಲೇ ದಾಖಲೆಗಳನ್ನು ಮಾಡಿಸಲು ಸಾಧ್ಯವಾಗುತ್ತಿದೆ. ಯಾವುದೇ ಕಾನೂನು ಜಾರಿಗೊಂಡರೂ ಬಡವರ ಸುಲಿಗೆ ಇಂದಿಗೂ ತಪ್ಪಿದ್ದಲ್ಲ. ಲಕ್ಷಾಂತರ ಹಣ ವ್ಯಯಿಸಿದರೂ ಕೊನೆಗೆ ನಮ್ಮ ದಾಖಲಾತಿಗಳು ಪೂರ್ಣಗೊಳ್ಳಬೇಕಾದರೆ ಮಧ್ಯವರ್ತಿಗಳೇ ಮೂಗು ತೂರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ.
ಬಾರನ ದಿನೇಶ್, ಮದೆ ಗ್ರಾಮ
ಒಂದು ಸರ್ಕಾರಿ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳು ಬಂದು ಕೆಲಸ ಮಾಡಿಸಿಕೊಡುವುದು ಎನ್ನುವುದೇ ವಿಪರ್ಯಾಸ. ಸರ್ಕಾರದಿಂದ ಸಂಬಳ ಪಡೆಯುವ ನೌಕರ ವರ್ಗ ನಿಜಾರ್ಥದಲ್ಲಿ ಪ್ರಜಾ ಸೇವಕರಾಗಿ ಕೆಲಸ ಮಾಡಬೇಕು. ಇದು ಬಿಟ್ಟು ಕೆಲಸ ಮಾಡಿಕೊಡಲು ಹಣಕ್ಕಾಗಿ ಎದುರು ನೋಡುವುದು ಪಾಪದ ಕೆಲಸ. ಮಧ್ಯವರ್ತಿಗಳು ಮತ್ತು ಸರ್ಕಾರಿ ನೌಕರರ ಮಧ್ಯೆ ಇರುವ ಸಂಪರ್ಕ ಕೊಂಡಿ ಕಳಚಿದಾಗಲೇ ಮುಕ್ತ ವಾತಾರವರಣದಲ್ಲಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯ.
ಬಾಡನ ಡೈಸಿ ಲೋಕೇಶ್, ಕಡಿಯತ್ತೂರು ಗ್ರಾಮ
ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಬಗ್ಗೆ ನಮಗೂ ಸಾಕಷ್ಟು ದೂರುಗಳು ಬಂದಿದೆ. ಈ ಸಂಬAಧ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ಕೊಡಲಾಗಿದೆ. ಎಲ್ಲೂ ಸಾರ್ವಜನಿಕರ ಕೆಲಸದಲ್ಲಿ ವಿನಾಕಾರಣ ವಿಳಂಬ ಮಾಡದಂತೆ ತಿಳಿಸಿ ಹೇಳಲಾಗಿದೆ. ಪಾರದರ್ಶಕ ವ್ಯವಸ್ಥೆಯಲ್ಲಿ ಸರ್ಕಾರಿ ಕೆಲಸಗಳು ಆಗಬೇಕು. ಸಮಸ್ಯೆಗಳು ಇದ್ದಲ್ಲಿ ಸಾರ್ವಜನಿಕರು ನಮ್ಮ ಸಂಪರ್ಕ ಮಾಡಬಹುದು.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ