

ಮದ್ದೂರು: ಪಟ್ಟಣದ ಕೊಲ್ಲಿ ವೃತ್ತದ ಬಳಿ ಲಕ್ಷಾಂತರ ರೂ. ವ್ಯಯಿಸಿ ನಿರ್ಮಾಣ ಮಾಡಿರುವ ಹೈಮಾಸ್ಟ್ ದೀಪ ಕೆಟ್ಟು ಹಲವು ತಿಂಗಳು ಕಳೆದಿದ್ದರೂ ಸಂಬಂಧಿಸಿದ ಯಾವೊಬ್ಬ ಅಧಿಕಾರಿಯೂ ಈವರೆಗೂ ಕ್ರಮ ವಹಿಸಿಲ್ಲ.
ಕೊಲ್ಲಿ ವೃತ್ತ ದೊಡ್ಡ ವೃತ್ತವಾಗಿದ್ದು, ಇದು ಸುಮಾರು 6 ರಸ್ತೆಗಳನ್ನು ಸಂದಿಸುತ್ತದೆ. ಮಂಡ್ಯದಿಂದ ಬೆಂಗಳೂರಿಗೆ ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಯ ಮೂಲಕ ಹೋಗಲು, ಪಟ್ಣಣದಿಂದ ಹೆದ್ದಾರಿಗೆ ಆಗಮಿಸುವುದು ಸೇರಿದಂತೆ 6 ರಸ್ತೆಗಳನ್ನು ಕೂಡುತ್ತವೆ. ಇದರಿಂದ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರವಾಗುತ್ತದೆ. ಆದ್ದರಿಂದ ರಾತ್ರಿ ವೇಳೆ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಾಕಿರುವ ಹೈಮಾಸ್ಟ್ ದೀಪ ಕೆಟ್ಟು ಸುಮಾರು 6 ತಿಂಗಳು ಕಳೆದಿವೆ. ಇದನ್ನು ರಿಪೇರಿ ಮಾಡಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೈಮಾಸ್ಟ್ ದೀಪ ಕೆಟ್ಟಿರುವುದರಿಂದ ರಾತ್ರಿ ವೇಳೆಯಲ್ಲಿ ವೃತ್ತ ಸುತ್ತಮುತ್ತ ಕತ್ತಲು ಅವರಿಸುತ್ತದೆ. ಇದರಿಂದ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ತುಂಬಾ ತೊಂದರೆಯಾಗುವ ಜತೆಗೆ ಹಲವಾರು ಬಾರಿ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸಿ ಬಹಳಷ್ಟು ಜನರು ಗಾಯಗೊಂಡಿರುವ ನಿದರ್ಶನಗಳಿವೆ.
ಕೊಲ್ಲಿ ವೃತ್ತದ ಬಳಿ ಟ್ರಾಫಿಕ್ ಸಿಗ್ನಲ್ ದೀಪವಿಲ್ಲ: ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಕೊಲ್ಲಿ ವೃತ್ತದಲ್ಲಿ ನಿತ್ಯ ಸಾವಿರಾರು ವಾಹನ ಸಂಚರಿಸುತ್ತವೆ. ಆದರೆ, ಇಲ್ಲಿ ಸಂಬಂಧಿಸಿದ ಅಧಿಕಾರಿಗಳು ಸಿಗ್ನಲ್ ದೀಪಗಳನ್ನು ಅಳವಡಿಸಿಲ್ಲ ಮತ್ತು ಕನಿಷ್ಠ ಒಬ್ಬ ಸಂಚಾರ ಪೊಲೀಸ್ ಪೇದೆಯನ್ನು ನಿಯೋಜಿಸಿಲ್ಲ. ಇದರಿಂದ ವಾಹನ ಸವಾರರಿಗೆ ಮತ್ತು ಪಾದಚಾರಿಗಳು ಹೆದ್ದಾರಿ ದಾಟುವುದೇ ದೊಡ್ಡ ಸಮಸ್ಯೆಯಾಗಿದೆ.
ಹೆದ್ದಾರಿ ಪಕ್ಕದಲ್ಲೇ ಕಸದ ರಾಶಿ: ಕೊಲ್ಲಿ ವೃತ್ತದ ಬಳಿಯಿರುವ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಸದ ರಾಶಿ ಬಿದಿದೆ. ರಸ್ತೆ ಇಡೀ ಅನೈರ್ಮಲ್ಯದಿಂದ ಕೂಡಿದೆ. ಜತೆಗೆ ಕಸ ಹಾಗೂ ಕಲುಷಿತ ವಸ್ತುಗಳು ಕೊಲ್ಲಿಯಲ್ಲಿ ಹರಿಯುವ ನೀರಿಗೆ ಸೇರಿ ನೀರು ಕೂಡ ಕಲುಷಿತವಾಗುತ್ತಿದೆ. ಕೊಲ್ಲಿ 2 ಭಾಗದಲ್ಲೂ ಹೆದ್ದಾರಿ ಪಕ್ಕದಲ್ಲಿ ಕಸದ ರಾಶಿ ಬಿದ್ದಿದ್ದರೂ ಪುರಸಭಾ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಕಸ ತಂದು ಬಿಸಾಡುವ ಸಾರ್ವಜನಿಕರಿಗೂ ಕಡಿವಾಣ ಹಾಕುತ್ತಿಲ್ಲ. ಜನರಲ್ಲಿ ನೈರ್ಮಲ್ಯದ ಜಾಗೃತಿಯನ್ನು ಮೂಡಿಸುತ್ತಿಲ್ಲ. ಚನ್ನೇಗೌಡನದೊಡ್ಡಿ ಸಮೀಪದ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೂ ಕಸದ ರಾಶಿ ಬಿದ್ದಿದ್ದು, ಕಸದ ರಾಶಿ ಮತ್ತು ಗಬ್ಬುವಾಸನೆ ವಾಹನ ಸವಾರರಿಗೆ ಸ್ವಾಗತ ಕೋರುತ್ತಿರುವುದು ವಿಪರ್ಯಾಸದ ಸಂಗತಿ. ಕೊಲ್ಲಿ ವೃತ್ತದ ಬಳಿ ಕಸ ಹಾಕುವವರಿಗೆ ದಂಡ ಹಾಕುವ ಉದ್ದೇಶದಿಂದ ಸಿಸಿ ಕ್ಯಾಮರಾ ಅಳವಡಿಸಿಲಾಗಿತ್ತು. ಆದರೆ, ಅದು ಕೆಟ್ಟು ಹಲವು ತಿಂಗಳು ಕಳೆದಿವೆ.
ಕೊಲ್ಲಿ ವೃತ್ತದ ಬಳಿ ಕೆಟ್ಟಿರುವ ಹೈಮಾಸ್ಟ್ ದೀಪವನ್ನು ಸರಿಪಡಿಸಲು ಕ್ರಮ ಕೈಗೊಳ್ಳುವ ಜತೆಗೆ ಕೊಲ್ಲಿ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ದೀಪ ಅಳವಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗುವುದು. ಕೊಲ್ಲಿ ಬಳಿ ಇರುವ ಕಸದ ರಾಶಿಯನ್ನು ತೆರವುಗೊಳಿಸಲಾಗುವುದು. ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗುವುದು.
ಎಂ.ಶ್ರೀಧರ್ ಪುರಸಭಾ ಪ್ರಭಾರ ಮುಖ್ಯಾಧಿಕಾರಿ ಮದ್ದೂರು.
ಕೊಲ್ಲಿ ವೃತ್ತದ ಬಳಿ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಾಣ ಮಾಡಿರುವ ಹೈಮಾಸ್ಟ್ ದೀಪ ಕೆಟ್ಟು ಸುಮಾರು 6 ತಿಂಗಳು ಕಳೆದಿದ್ದರೂ ರಿಪೇರಿ ಮಾಡಿಲ್ಲ. ಇದರಿಂದ ರಾತ್ರಿ ವೇಳೆ ಸಂಚರಿಸುವ ವಾಹನಗಳು ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ದೀಪ ಅಳವಡಿಸಲು ಕ್ರಮವಹಿಸಬೇಕು.
ಎಂ.ಸಿ.ಉಮೇಶ್ ಯುವ ಮುಖಂಡ ಮದ್ದೂರು
ಕೊಲ್ಲಿ ವೃತ್ತದ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕ ಕಸದ ರಾಶಿ ಬಿದ್ದಿದ್ದು, ಇದರಿಂದ ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಜತೆಗೆ ಕಸ ಮತ್ತು ಕಲುಷಿತ ನೀರು ಕೊಲ್ಲಿಗೆ ಸೇರಿಕೊಂಡು ನೀರು ಮಲೀನಗೊಳ್ಳುತ್ತಿದೆ. ಈ ಸಂಬಂಧ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು.
ಎಂ.ಆರ್.ಚಿದುಕುಮಾರ್ ಯುವ ಮುಖಂಡ ಮದ್ದೂರು.