

ಕೆ.ಎಂ.ದೊಡ್ಡಿ : ಮೆಳ್ಳಹಳ್ಳಿ ಗ್ರಾಮದಲ್ಲಿ ಗುರುವಾರ ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯನ್ನು ಹೆದರಿಸಿ ಕಳ್ಳತನ ಮಾಡಲಾಗಿದೆ.
ಗ್ರಾಮದ ಮಾರಿಗುಡಿ ಬೀದಿಯ ವೆಂಕಟೇಶ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಪತ್ನಿ ಹರ್ಷಿತಾ ಒಬ್ಬರೇ ಇದ್ದುದ್ದನ್ನು ಗಮನಿಸಿದ ಇಬ್ಬರು ಮುಸುಕುಧಾರಿಗಳು ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಹೆದರಿಸಿದ್ದಾರೆ.
ಅಲ್ಲದೆ ಬೀರು ಬಾಗಿಲು ತೆಗೆಸಿದ ಖದೀಮರು ಅಲ್ಲಿದ್ದ ಸುಮಾರು 25 ಗ್ರಾಂ ಚಿನ್ನಾಭರಣ ಹಾಗೂ 1.60 ಲಕ್ಷ ರೂ. ನಗದ ದೋಚಿದ್ದಾರೆ. ಬಳಿಕ ಕೂಗಿಕೊಂಡರೆ ಕೊಲ್ಲುವುದಾಗಿ ಹೇಳಿದ ಕಳ್ಳರು, ಕೈ-ಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಪಾರಾರಿಯಾಗಿದ್ದಾರೆ. ಹಾಡಹಗಲೇ ನಡೆದಿರುವ ಕಳ್ಳತನ ಪ್ರಕರಣದಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಕೃಷ್ಣಪ್ಪ, ಮದ್ದೂರು ಸರ್ಕಲ್ ಇನ್‌ಸ್ಪೆಕ್ಟರ್ ಶಿವಕುಮಾರ್ ಹಾಗೂ ಎಎಸ್‌ಐ ಪುಟ್ಟಮಾದು ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು. ಬಳಿಕ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಮಾಹಿತಿ ಕಲೆಹಾಕಿತು.
ಕೆ.ಎಂ.ದೊಡ್ಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಲಾಗಿದೆ.