ಕುಶಾಲನಗರ ಪುರಸಭೆಯಲ್ಲಿ ದಲ್ಲಾಳಿಗಳ ದಂಧೆ

brocker
Published on

ಮಡಿಕೇರಿ:

ಕುಶಾಲನಗರ ಪುರಸಭೆಯಲ್ಲಿ ದಲ್ಲಾಳಿಗಳ ಹಾವಳಿ ಮಿತಿಮೀರಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿದೆ. ಜನಸಾಮಾನ್ಯರು ನೇರವಾಗಿ ಹೋದರೆ ಯಾವುದೇ ಕೆಲಸ ಇಲ್ಲಿ ಆಗುತ್ತಿಲ್ಲ. ಸಣ್ಣ ಪುಟ್ಟ ಕೆಲಸಗಳಿಗೂ ಅಲೆದಾಡಿಸಲಾಗುತ್ತದೆ. ಇಲ್ಲಿನ ಸಿಬ್ಬಂದಿ ದಲ್ಲಾಳಿಗಳ ಜತೆ ಕೈ ಜೋಡಿಸಿರುವುದರಿಂದಲೇ ಇಂಥ ಪರಿಸ್ಥಿತಿ ಬಂದಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಕೆಲ ಪ್ರಜ್ಞಾವಂತರು 'ಬನ್ನಿ ಬ್ರೋಕರ್ ಮುಕ್ತ ಪುರಸಭೆ ಮಾಡೋಣ' ಎನ್ನುವ ಅಭಿಯಾನ ಆರಂಭಿಸಿದ್ದಾರೆ.

ಪಟ್ಟಣ ಪಂಚಾಯಿತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕುಶಾಲನಗರ ಸ್ಥಳೀಯ ಆಡಳಿತ ಮೇಲ್ದರ್ಜೆಗೆ ಏರಿ ಪುರಸಭೆಯ ಹಂತ ತಲುಪಿದೆ. ಪಟ್ಟಣದ ಬೆಳವಣಿಗೆಯ ವೇಗ ಗಮನಿಸಿದರೆ ಸದ್ಯದಲ್ಲೇ ನಗರಸಭೆ ಆಗಿ ಪದೋನ್ನತಿ ಪಡೆದರೂ ಅಚ್ಚರಿ ಇಲ್ಲ. ಕಳೆದ ತಿಂಗಳಷ್ಟೇ ನೂತನ ಸುಸಜ್ಜಿತ ಕಟ್ಟಡದಲ್ಲಿ ಪುರಸಭೆಯ ಕಚೇರಿಯೂ ಆರಂಭವಾಗಿದೆ. ಹವಾನಿಯಂತ್ರಿತ ವ್ಯವಸ್ಥೆ, ಪ್ರತಿಯೊಂದು ಶಾಖೆಗಳಿಗೂ ಪ್ರತ್ಯೇಕ ವಿಭಾಗ, ಎಲ್ಲಾ ಅಧಿಕಾರಿಗಳಿಗೂ ಪ್ರತ್ಯೇಕ ಕ್ಯಾಬಿನ್... ಹೀಗೆ ಕಾರ್ಪೋರೇಟ್ ಸಂಸ್ಥೆಯೊAದರ ಕಚೇರಿ ಮಾದರಿಯಲ್ಲಿ ಕುಶಾಲನಗರ ಪುರಸಭೆ ಅದ್ಧೂರಿತನ ಪಡೆದುಕೊಂಡಿದೆ. ಆದರೆ ಇಲ್ಲಿಯ ವ್ಯವಸ್ಥೆಗಳು ಮಾತ್ರ ಇನ್ನೂ ಬದಲಾಗದಿರುವುದು ಜನಸಾಮಾನ್ಯರಲ್ಲಿ ಬೇಸರ ಮೂಡಿಸಿದೆ.

ಕುಶಾಲನಗರ ಪುರಸಭೆಯ ಬಗ್ಗೆ ಸಾಕಷ್ಟು ಮಾಹಿತಿ ಅರಿತುಕೊಂಡಿರುವ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕಚೇರಿ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಮಾಡಿದ ಭಾಷಣ ವೇಳೆ ಸೂಚ್ಯವಾಗಿ ವಿಷಯ ಪ್ರಸ್ತಾಪ ಮಾಡಿದ್ದರು. 'ಇಕ್ಕಟ್ಟಿನ ವ್ಯವಸ್ಥೆಯಲ್ಲಿ ನಡೆಯುತ್ತಿದ್ದ ಕಚೇರಿ ಸುಸಜ್ಜಿತ ಕಟ್ಟಡಕ್ಕೆ ಬಂದಿದೆ. ಅಧಿಕಾರಿ ಮತ್ತು ಸಿಬ್ಬಂದಿಗೆ ಇಲ್ಲಿ ಯಾವುದೇ ಕೊರತೆ ಆಗದಂತೆ ವ್ಯವಸ್ಥೆಗಳಿವೆ. ಪುರಸಭೆಯ ಕಚೇರಿ ಅತ್ಯಾಧುನಿಕವಾಗಿ ದೊಡ್ಡ ಮಟ್ಟದಲ್ಲಿ ಬದಲಾಗಿದೆ. ಇಲ್ಲಿ ಕೆಲಸ ಮಾಡುವವರ ಮನೋಸ್ಥಿತಿ ಬದಲಾಗಬೇಕು. ಯಾವುದೇ ವಿಳಂಭ ಇಲ್ಲದೆ ಸಾರ್ವಜನಿಕರಿಗೆ ಸೇವೆ ಸಿಗುವಂತಾಗಬೇಕು,' ಎನ್ನುವ ಆಶಯ ವ್ಯಕ್ತಪಡಿಸಿದ್ದರು.

ಆದರೆ ಯಾವುದಾದರೂ ಕೆಲಸದ ಮೇಲೆ ಪುರಸಭೆ ಕಚೇರಿಗೆ ತೆರಳಿದವರು ಕಹಿ ಅನುಭವದೊಂದಿಗೆ ವಾಪಸಾಗುವುದು ಇನ್ನೂ ನಿಂತಿಲ್ಲ. ಸಲೀಸಾಗಿ ಆಗುವ ಕೆಲಸಗಳಿಗೂ ಅಲೆದಾಡಿಸುವುದಕ್ಕೆ ಕಡಿವಾಣ ಬಿದ್ದಿಲ್ಲ ಎನ್ನುವ ಆರೋಪ ಈಗಲೂ ಕೇಳಿಬರುತ್ತಿದೆ.

ಈ ಸಂಬAಧ ವಿಜಯವಾಣಿ ಜತೆ ದೂರಿಕೊಂಡಿರುವ ಬಹುತೇಕರು ಪುರಸಭೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಕೆಲಸಕ್ಕೆ ಹೋದರೂ 'ಸರ್ವರ್ ಸರಿ ಇಲ್ಲ' ಎನ್ನುವ ಸಿದ್ಧ ಉತ್ತರ ಇಲ್ಲಿಯ ಸಿಬ್ಬಂದಿಯಿAದ ಬರುವುದು ಸಾಮಾನ್ಯ. ಎಲ್ಲ ಸರಿಯಿದ್ದರೆ ಸಂಬAಧಿಸಿದ ಕಡತ ಮುಂದಕ್ಕೆ ಕಳಿಸುವ ಅಧಿಕಾರಿ ಸಿಗುವುದಿಲ್ಲ. ಕೆಲವು ಕಡತಗಳನ್ನು ತಿಂಗಳುಗಟ್ಟಲೆ ಇಟ್ಟುಕೊಂಡು ಆಟವಾಡಿಸಲಾಗುತ್ತದೆ ಎನ್ನುವ ಆರೋಪವೂ ಇದೆ.

ಮತ್ತೊಂದು ಕಡೆ ಪುರಸಭೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಆರೋಪಗಳು ಸಾಮಾನ್ಯವಾಗಿದೆ. ಚಿಕ್ಕಪುಟ್ಟ ಪುಢಾರಿಗಳು ದಲ್ಲಾಳಿ ಕೆಲಸವನ್ನೇ ಇಲ್ಲಿ ಪೂರ್ಣಾವಧಿ ಉದ್ಯೋಗ ಮಾಡಿಕೊಂಡಿದ್ದಾರೆ. ಇವರಿಗೆ ಕೆಲವು ಕೌನ್ಸಿಲರ್‌ಗಳು, ಜನಪ್ರತಿನಿಧಿಗಳ ಪ್ರೋತ್ಸಾಹ ಕೂಡ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ನೇರವಾಗಿ ಕಚೇರಿಗೆ ಹೋದರೆ ಸಬೂಬು ಹೇಳಿ ಅಲೆದಾಡಿಸುವ ಸಿಬ್ಬಂದಿ ದಲ್ಲಾಳಿಗಳ ಮೂಲಕ ಹೋದರೆ ಅದೇ ಕೆಲಸವನ್ನು ಒಂದೇ ದಿನದಲ್ಲಿ ಮಾಡಿಕೊಡುತ್ತಾರೆ ಎನ್ನುವುದೂ ಇಲ್ಲಿ ಗುಟ್ಟಾಗಿ ಉಳಿದಿಲ್ಲ. ಸಂಜೆ ಕಚೇರಿ ಅವಧಿ ಮುಗಿದ ನಂತರವೂ ಅಧಿಕಾರಿಗಳ ಕ್ಯಾಬೀನ್‌ಗಳಲ್ಲಿ ದಲ್ಲಾಳಿಗಳು ಎಡತಾಕುವುದು ಸಾಮಾನ್ಯ ದೃಶ್ಯವಾಗಿದೆ ಎನ್ನುತ್ತಾರೆ ಸ್ಥಳೀಯರು.

ಕುಶಾಲನಗರ ಪುರಸಭೆ ಒಳಗೆ ದಲ್ಲಾಳಿಗಳು ಎಷ್ಟರ ಮಟ್ಟಿಗೆ ಆವರಿಸಿಕೊಂಡಿದ್ದಾರೆ ಎಂದರೆ ಕಚೇರಿಯಲ್ಲಿ ಎಲ್ಲೆಂದರಲ್ಲಿ ಅವರುಗಳೇ ಕಂಡು ಬರುತ್ತಾರೆ. ಕಚೇರಿ ಆವರಣ, ಸಿಬ್ಬಂದಿ ಸುತ್ತಮುತ್ತ ಇವರುಗಳೇ ಸೇರಿಕೊಂಡಿರುತ್ತಾರೆ. ಜನಸಾಮಾನ್ಯರು ತಮ್ಮ ಕೆಲಸ ಮಾಡಿಸಿಕೊಳ್ಳಲಾಗದ ರೀತಿಯಲ್ಲಿ ಇವರ ಅಬ್ಬರ ಕಂಡುಬರುತ್ತದೆ. ಜನಸಾಮಾನ್ಯರು ನೇರವಾಗಿ ಅವರವರ ಕೆಲಸ ಮಾಡಿಸಿಕೊಳ್ಳಲೂ ಬಿಡುವುದಿಲ್ಲ. ತಮ್ಮ ಮೂಲಕವೇ ಮಾಡಿಸಿಕೊಳ್ಳುವಂತೆ ಒತ್ತಡ ಹೇರುತ್ತಾರೆ. ನೇರವಾಗಿ ಹೋದರೆ ಅಡ್ಡಗಾಲು ಹಾಕುತ್ತಾರೆ ಎನ್ನುವ ಆರೋಪಗಳೂ ಇದೆ. 'ದಲ್ಲಾಳಿಗಳಿಗೇ ಒಂದು ಕಚೇರಿ ಕೊಟ್ಟುಬಿಡಿ' ಎಂದು ಲೇವಡಿ ಮಾಡುವಷ್ಟರ ಮಟ್ಟಿಗೆ ಇಲ್ಲಿ ದಲ್ಲಾಳಿಗಳು ತುಂಬಿದ್ದಾರೆ.

ಪುರಸಭೆ ಒಳಗೆ ದಲ್ಲಾಳಿಗಳ ಹಾವಳಿ ಇರುವುದು ಬಹಿರಂಗ ಸತ್ಯದ ಸಂಗತಿ ಆಗಿದೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ಆಗಿದೆ. ಪುರಸಭೆ ಸಾಮಾನ್ಯ ಸಭೆಯಲ್ಲೂ ಇದರ ಪ್ರಸ್ತಾಪ ಆಗಿದ್ದು, ದಲ್ಲಾಳಿಗಳಿಗೆ ಕಡಿವಾಣ ಹಾಕಿ, ಜನಸಾಮಾನ್ಯರನ್ನು ಅಲೆದಾಡಿಸದೇ ಕೆಲಸ ಮಾಡಿಕೊಡುವಂತೆ ಸದಸ್ಯರು ಒತ್ತಾಯಿಸಿದ್ದಾರೆ. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕೂಡ ಸಾಕಷ್ಟು ಬಾರಿ ಕಟು ಶಬ್ದಗಳಿಂದಲೇ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಆದರೆ ಪುರಸಭೆ ಕಚೇರಿಯ ವ್ಯವಸ್ಥೆ ಮಾತ್ರ ಬದಲಾಗದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಕುಶಾಲನಗರ ಪುರಸಭೆಯಲ್ಲಿ ವಿಳಂಭ ನೀತಿ ಮತ್ತು ದಲ್ಲಾಳಿಗಳ ಹಾವಳಿಯಿಂದ ಬೇಸತ್ತಿರುವ ಪಟ್ಟಣದ ಕೆಲವು ಪ್ರಜ್ಞಾವಂತರು 'ಬನ್ನಿ ಬ್ರೋಕರ್ ಮುಕ್ತ ಪುರಸಭೆ ಮಾಡೋಣ' ಎನ್ನುವ ಅಭಿಯಾನ ಆರಂಭಿಸಿದ್ದಾರೆ. ಈ ಸಂಬAಧ ಈಗಾಗಲೇ ಪುರಸಭೆ ಮುಖ್ಯಾಧಿಕಾರಿ ಭೇಟಿ ಮಾಡಿ ಮಾಹಿತಿ ಹಕ್ಕು ಕಾಯ್ದೆ ಅಡಿ ಒಂದು ತಿಂಗಳ ಸಿಸಿಟಿವಿ ಫೂಟೇಜ್‌ಗೆ ಬೇಡಿಕೆ ಇಡಲಾಗಿದೆ. ಇದನ್ನು ಪರಿಶೀಲಿಸಿ ತಮ್ಮ ತಮ್ಮ ಕೆಲಸಗಳಿಗೆ ಸಾರ್ವಜನಿಕರು ಎಷ್ಟು ಸಂಖ್ಯೆಯಲ್ಲಿ ಬರುತ್ತಾರೆ ? ಎಷ್ಟು ಸಲ ಬರುತ್ತಾರೆ ? ದಲ್ಲಾಳಿಗಳು ಯಾರೆಲ್ಲಾ ಬರುತ್ತಾರೆ ? ಎಷ್ಟು ಗಂಟೆ ತನಕ ಇರುತ್ತಾರೆ ? ಯಾರ ಬಳಿಯೆಲ್ಲಾ ತೆರಳುತ್ತಾರೆ ? ಅವರ ಬಳಿ ಯಾವ ಕಡತಗಳು ಇರುತ್ತದೆ ? ಮತ್ತಿತರ ಮಾಹಿತಿಗಳನ್ನು ಪರಿಶೀಲಿಸಿ ಕಲೆ ಹಾಕಲಾಗುತ್ತದೆ. ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಪುರಸಭೆ ಸಾಮಾನ್ಯ ಸಭೆ, ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿ, ಲೋಕಾಯುಕ್ತ, ಸ್ಥಳೀಯ ಸಂಘ ಸಂಸ್ಥೆಗಳು, ರಾಜಜಕೀಯ ಮುಖಂಡರು, ಮಾಧ್ಯಮ ಪ್ರತಿನಿಧಿಗಳಿಗೆ ತಲುಪಿಸಲಾಗುತ್ತದೆ. ಇದರಿಂದ ಪ್ರಯೋಜನ ಆಗದಿದ್ದರೆ ಸಮಾನ ಮನಸ್ಕರರನ್ನು ಜತೆ ಗೂಡಿಸಿ ರಾಜಕಿಯೇತರ ಹೋರಾಟಕ್ಕೆ ವೇದಿಕೆ ಸಿದ್ಧ ಮಾಡುವ ಚಿಂತನೆ ನಡೆದಿದೆ.

ಕುಶಾಲನಗರ ಪುರಸಭೆ ಒಂದು ರೀತಿಯಲ್ಲಿ ದಲ್ಲಾಳಿಗಳ ಕಚೇರಿ ಆಗಿದೆ. ನೂತನ ಕಟ್ಟಡದಲ್ಲಿ ಅವರಿಗೂ ಒಂದು ಕಚೇರಿ ಮಾಡಿಕೊಟ್ಟರೆ ವ್ಯವಹಾರ ಕುದುರಿಸಲು ಅನುಕೂಲ ಆಗುತ್ತಿತ್ತು ಎಂದರೂ ತಪ್ಪಾಗುವುದಿಲ್ಲ. ದಲ್ಲಾಳಿಗಳ ಹಾವಳಿಯಿಂದ ಜನಸಾಮಾನ್ಯರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ದಲ್ಲಾಳಿಗಳ ಮೂಲಕ ಹೋಗದಿದ್ದರೆ ಚಿಕ್ಕ ಪುಟ್ಟ ಕೆಲಸಗಳನ್ನೂ ಅಧಿಕಾರಿಗಳು ಮಾಡಿಕೊಡದ ಸ್ಥಿತಿ ನಿರ್ಮಾಣ ಆಗಿದೆ. ದಲ್ಲಾಳಿಗಳು ವ್ಯವಹರಿಸುವುದರಿಂದ ಕಾನೂನು ಬಾಹಿರ ಚಟುವಟಿಕೆಗಳೂ ಇಲ್ಲಿ ನಡೆಯುತ್ತಿರುವ ಶಂಕೆ ಇದೆ. ಸಂಬAಧಿಸಿದವರು ಕೂಡಲೇ ಎಚ್ಚೆತ್ತುಕೊಂಡು ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ.

ಕೆ.ಜಿ. ಮನು, ಮುಖ್ಯಸ್ಥರು, ಅಳಿಲು ಸೇವೆ ಟ್ರಸ್ಟ್, ಕುಶಾಲನಗರ

ಕುಶಾಲನಗರದಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕದಿದ್ದರೆ ಜನಸಾಮಾನ್ಯರ ಬದುಕು ಹಾಳಾಗುತ್ತದೆ. ಈ ಸಂಬAಧ ಸಾಕಷ್ಟು ಬಾರಿ ಹೋರಾಟ ಮಾಡಿಕೊಂಡು ಬಂದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ಬಾರಿ ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಲೇಬೇಕಿದೆ. ದಲ್ಲಾಳಿಗಳ ವ್ಯವಹಾರದ ಎಲ್ಲಾ ಮಾಹಿತಿ ಕಲೆ ಹಾಕಿ ಸಂಬAಧಿಸಿದ ಎಲ್ಲರಿಗೂ ದೂರು ನೀಡಲಾಗುವುದು. ಇಷ್ಟಾಗಿಯೂ ಕಡಿವಾಣ ಬೀಳದಿದ್ದರೆ ಸಮಾನಮನಸ್ಕರ ಬೆಂಬಲ ಪಡೆದುಕೊಂಡು ಮುಂದಿನ ಹೋರಾಟದ ಹಾದಿ ರೂಪಿಸಲಾಗುವುದು.

ಎಂ.ಡಿ. ಕೃಷ್ಣಪ್ಪ, ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ, ಕೊಡಗು

ಕುಶಾಲನಗರ ಪುರಸಭೆಯಲ್ಲಿ ದಲ್ಲಾಳಿಗಳ ಹಾವಳಿ ದೂರಿನ ಸಂಬAಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈಗಾಗಲೇ ಸಿಬ್ಬಂದಿ ಸಭೆ ಕರೆದು ದಲ್ಲಾಳಿಗಳಿಗೆ ಅವಕಾಶ ಕೊಡದಂತೆ ಸೂಚನೆ ನೀಡಲಾಗಿದೆ. ಯಾವುದೇ ದೂರುಗಳು ಬಾರದಂತೆ ಸಾರ್ವಜನಿಕರ ಕೆಲಸಗಳನ್ನು ಕಾನೂನಿನ ಮಿತಿಯೊಳಗೆ ಮಾಡಿಕೊಡುವಂತೆ ಹೇಳಲಾಗಿದೆ. ವಿನಾ ಕಾರಣ ವಿಳಂಬ ಮಾಡಿದರೆ, ಆರೋಪಗಳು ಕೇಳಿಬಂದರೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಟಿ.ಎಸ್. ಗಿರೀಶ್, ಮುಖ್ಯಾಧಿಕಾರಿ, ಪುರಸಭೆ, ಕುಶಾಲನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net