

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಇಂದಿನ ಆಧುನಿಕತೆಯಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅವಕಾಶಗಳಿವೆ. ಹಾಗೆಯೇ ಉನ್ನತ ಶಿಕ್ಷಣದಲ್ಲಿ ಸಂಶೋಧನೆ ಪಾತ್ರವೂ ಮಹತ್ತರವಾದದ್ದು ಮತ್ತು ಸಂಶೋಧನೆಯಿಂದ ನಮ್ಮ ಜ್ಞಾನ ವಿಸ್ತರಿಸುತ್ತದೆ. ವಿದ್ಯಾರ್ಥಿಗಳು ಇಂತಹ ಅವಕಾಶ ಬಳಸಿಕೊಂಡು ಮುನ್ನಡೆಯಬೇಕು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಐಸಿಎಸ್ಎಸ್ಆರ್ ಪ್ರಾಯೋಜಕತ್ವದಲ್ಲಿ ಸಂಶೋಧಕರಿಗೆ ಹಾಗೂ ಬೋಧಕರಿಗೆ ಎರಡು ದಿನಗಳ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಮೈಸೂರು ವಿವಿ ಪ್ರಾಧ್ಯಾಪಕ ಪ್ರೊ.ಕೆ.ಬಿ.ರಂಗಪ್ಪ ಮಾತನಾಡಿ, ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳು ಸಂಶೋಧಕರು ಹಾಗೂ ಬೋಧಕರಲ್ಲಿ ಹೊಸ ಚೈತನ್ಯದೊಂದಿಗೆ ಸಮಾಜಮುಖಿಯನ್ನಾಗಿಸುತ್ತವೆ ಎಂದರು.
ವಾಣಿಜ್ಯಶಾಸ್ತ್ರ ವಿಭಾಗದ ಅಧ್ಯಕ್ಷೆ ಡಾ.ಪ್ರೀತಿ ಕೀರ್ತಿ ಡಿಸೋಜ, ಪ್ರಾಧ್ಯಾಪಕರಾದ ಪ್ರೊ.ಮುನಿರಾಜು, ಪ್ರೊ.ವೇದವ, ಪ್ರೊ.ಪರಮೇಶ್ವರ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಾಗಾರದ ನಿರ್ದೇಶಕ ಪ್ರೊ.ಈಶ್ವರ ಪಿ. ಪ್ರಾಸ್ತಾವಿಕ ಮಾತನಾಡಿದರು.