ಸ್ತ್ರೀ ಕುಲದಿಂದಲೇ ಜಗತ್ತಿಗೆ ಚೇತನ, ಉದ್ಯಮಿ ಅಂಜನಾ ಬಸನಗೌಡರ ಅಭಿಮತ, ಬ್ರೈಟ್ ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ

IMG_20250313_205127_836-1.jpg
Published on

ಹುಬ್ಬಳ್ಳಿ: ಜಗತ್ತಿಗೆ ಚೈತನ್ಯ ತಂದಿರುವ ಸ್ತ್ರೀ ಕುಲವು ಅಭಿವೃದ್ಧಿ ಪಥದಲ್ಲಿದೆ. ಇದೀಗ ಸಮಾನತೆಯ ಜತೆಗೆ ಒಗ್ಗಟ್ಟಿನಲ್ಲಿಯೂ ಮಹಿಳೆಯರು ಮುಂದಿರುವುದು ದೇಶದ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಯಶಸ್ವಿ ಉದ್ಯಮಶೀಲ ಮಹಿಳೆ ಅಂಜನಾ ಬಸನಗೌಡರ ಅಭಿಪ್ರಾಯಪಟ್ಟರು.

ನಗರದ ಗೋಕುಲ ರಸ್ತೆಯಲ್ಲಿರುವ ಬ್ರೈಟ್ ಬಿಜಿನೆಸ್ ಸ್ಕೂಲ್ ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಅತಿಥಿಗಳಾಗಿ ಮಾತನಾಡಿದರು.

ಮಹಿಳೆಯರ ಸಾಧನೆಗೆ ಎಲ್ಲರೂ ಮನಃಪೂರ್ವಕವಾಗಿ ಗೌರವ ಸೂಚಿಸುವ ದಿನವೇ ಮಹಿಳಾ ದಿನವಾಗಿದೆ. ಪುರುಷರಿಗೆ ಸಮಾನವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅವಳಿಗೆ ಪ್ರೇರಣೆ ನೀಡಿ ಎಲ್ಲ ಕ್ಷೇತ್ರಗಳಲ್ಲಿ ಅವಕಾಶ ಕೊಡುವುದು ವಿಕಸಿತ ಭಾರತ, ನವ ಭಾರತದ ಬೆಳವಣಿಗೆಗೆ ದಾರಿ ದೀಪವಾಗಲಿದೆ ಎಂದು ಹೇಳಿದರು.

ಖ್ಯಾತ ಕ್ರೀಡಾಪಟು ಹಾಗೂ ಕ್ರೀಡಾ ಔಷಧ ತಜ್ಞ ವೈದ್ಯೆ ಡಾ. ಶಾಂತಲಾ ಎಂ. ಯೋಗಿ ಮಾತನಾಡಿ, ಮಹಿಳೆಯರ ಸಾಧನೆ ಎಲ್ಲ ಕ್ಷೇತ್ರಗಳಲ್ಲಿಯೂ ಗಮನಾರ್ಹವಾಗಿದೆ. ವೈದ್ಯಕಿಯ, ತಾಂತ್ರಿಕ, ಸಂಶೋಧನೆ ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ ಎಂದು ಹೇಳಿದರು.

ಶರಣೆ ನೀಲಾಂಬಿಕಾ ಹಳ್ಯಾಳ ಅವರು, 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಮಹಿಳೆಯರು ಸಮಾಜದಲ್ಲಿ ಮುಂದೆ ಬರಲು, ಧ್ವನಿ ಎತ್ತಲು ಅವಕಾಶ ಮಾಡಿಕೊಟ್ಟಂತೆ ಇಂದು ಪುರುಷರೂ ಮಹಿಳೆಯರಿಗೆ ಸಾಧನೆಗೈಯಲು ಬೆಂಬಲ ನೀಡಬೇಕಾಗಿದೆ ಎಂದರು.

ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಲಕ್ಷ್ಮೀ ಲಿಂಗಶೆಟ್ಟರ, ಡಾ. ಎಸ್.ಎಲ್. ಹಳ್ಯಾಳ, ಅನಿಲ ಲಿಂಗಶೆಟ್ಟರ, ಗ್ಲೋರಿಯಾ ಸಾಂತಾ ಮಾರಿಯಾ, ಸಂಕನೂರ, ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.

ದೀಪ್ತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಬ್ರೈಟ್ ನಿರ್ದೇಶಕ ಡಾ. ಪ್ರಸಾದ ರೂಡಗಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರಗತಿ ಮತ್ತು ಲಕ್ಷ್ಮೀ ಪರಿಚಯಿಸಿದರು. ಮಧು ಕಾರ್ಯಕ್ರಮ ನಿರೂಪಿಸಿದರು, ಅನನ್ಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net