ಅಭಿವೃದ್ಧಿಗೆ ಕೈಜೋಡಿಸಲು ಉದ್ಯೋಗ ಸೃಷ್ಟಿಕರ್ತರಾಗಿ,  ಆ್ಯಡ್ ಮೇನಿಯಾ ಉದ್ಘಾಟಿಸಿದ ಶಾಸಕ ಮಹೇಶ ಸಲಹೆ

IMG_20250523_200453_423.jpg
Published on

ಹುಬ್ಬಳ್ಳಿ: ವಿದ್ಯಾರ್ಥಿಗಳು ಕಲಿಕೆ ಮುಗಿದ ನಂತರ ಉದ್ಯೋಗ ಸೃಷ್ಟಿಕರ್ತರಾಗಿ ಭಾರತದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು, ಆತ್ಮನಿರ್ಭರ ಭಾರತ ಸಂಕಲ್ಪ ಮಾಡಿರುವ ಪ್ರಧಾನಿಯವರ ದೃಷ್ಟಿಕೋನ ಸಾಕಾರಗೊಳಿಸಲು ಕೈಜೋಡಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಇಲ್ಲಿಯ ಗೋಕುಲ ರಸ್ತೆ ಬ್ರೈಟ್ ಬಿಜಿನೆಸ್ ಸ್ಕೂಲ್ ನಲ್ಲಿ ಏರ್ಪಡಿಸಿದ್ದ ಜಾಹೀರಾತು ಮತ್ತು ಬ್ರಾಂಡಿಂಗ್ ಆಧಾರಿತ ಎರಡು ದಿನಗಳ ಅಂತರ್-ಸಂಸ್ಥೆ ಸ್ಪರ್ಧೆ ಆ್ಯಡ್ ಮೇನಿಯಾ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಜ್ಞಾನ ಎರಡರ ಮೇಲೂ ಗಮನ ಹರಿಸಬೇಕು. ಯಶಸ್ವಿ ಮಾರ್ಕೆಟಿಂಗ್ ನಲ್ಲಿ ಜಾಹೀರಾತು ಮತ್ತು ಬ್ರಾಂಡಿಂಗ್ ಮಹತ್ವದ ಪಾತ್ರ ವಹಿಸುತ್ತಿದ್ದು, ಈ ಕ್ಷೇತ್ರದಲ್ಲಿ ಹಲವು ಉದ್ಯೋಗ ಸೃಷ್ಟಿಸಬಹುದು ಎಂದರು.

ಎನ್ಎಸ್ ಇನ್ಫೋಟೆಕ್ ಸಿಇಒ ಸಂತೋಷ್ ಹುರಳಿಕೊಪ್ಪಿ ಮಾತನಾಡಿ, ಡಿಜಿಟಲ್ ಪ್ರಪಂಚ ಮತ್ತು ಕೃತಕ ಬುದ್ಧಿಮತ್ತೆಯ ಪ್ರಸ್ತುತ ಯುಗದಲ್ಲಿ ಜಾಹೀರಾತು ಅತ್ಯಂತ ಮಹತ್ವದ್ದು. ಸ್ಪರ್ಧೆಗೆ ಜಾಹೀರಾತು ಮತ್ತು ಬ್ರಾಂಡಿಂಗ್ ವಿಷಯ ಆಯ್ಕೆ ಮಾಡಿರುವುದು ಸ್ತುತ್ಯರ್ಹ ಎಂದರು.

ಬ್ರೈಟ್ ಸ್ಕೂಲ್ ನಿರ್ದೇಶಕ ಡಾ. ಪ್ರಸಾದ ರೂಡಗಿ, ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಸಂಗ್ರಹಿಸುವ ಮೂಲಕ "ಜಾಹೀರಾತು ಉನ್ಮಾದ' ಕಾರ್ಯಕ್ರಮದ ಕಲ್ಪನೆಗೆ ಮೂರ್ತ ರೂಪ ನೀಡಲಾಗಿದೆ. ಜಾಹೀರಾತು ಮಾರ್ಕೆಟಿಂಗ್ ವೃತ್ತಿಯ ಒಂದು ಭಾಗವಾಗಿರುವುದರಿಂದ, ಅದು ಮಾರುಕಟ್ಟೆ ಸಾಮರ್ಥ್ಯದ ಮೇಲೆ ಕೇಂದ್ರೀಕರಿಸುತ್ತದೆ. ಸ್ಪರ್ಧಿಗಳು ಉತ್ಸವದಿಂದ ಪಾಠಗಳನ್ನು ಕಲಿಯಲಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹುಬ್ಬಳ್ಳಿಯ ಬ್ರೈಟ್ ಬಿಜಿನೆಸ್ ಸ್ಕೂಲ್ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಯಾಳ, ಜ್ಞಾನ, ಅನುಷ್ಠಾನ ಮತ್ತು ಅನುಭವ ಎಂಬ ಮೂರು ಅಂಶಗಳ ಮೇಲೆ ಯಶಸ್ಸು ಅಡಗಿರುತ್ತದೆ ಎಂದರು.

ದೀಪ್ತಿ ಮತ್ತು ಸ್ಪೂರ್ತಿ ಪ್ರಾರ್ಥನೆ ಹಾಡಿದರು. ಸೃಷ್ಟಿ, ಕೃತಿಕಾ ಕಾರ್ಯಕ್ರಮ ನಿರೂಪಿಸಿದರು. ಸಂಯೋಜಕ ಪ್ರೊ. ನಿತಿನಚಂದ್ರ ವಂದಿಸಿದರು.
ತೇಜಸ್ವಿ ಶಿಕ್ಷಣ ಟ್ರಸ್ಟ್ ಕಾರ್ಯ ದೇಶ ಬಸವರಾಜ ಲಿಂಗಶೆಟ್ಟರ, ಬಸವ ಕೇಂದ್ರದ ಎಸ್.ವಿ. ಪಟ್ಟಣಶೆಟ್ಟಿ, ಸಮರ್ಥ ಕಾಲೇಜಿನ ಹಲಗತ್ತಿ, ಇತರರು ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ಬ್ರೈನ್ ಬಸ್ಟರ್ಸ್, ಬ್ರಾಂಡ್ ದಿ ಅನ್ ಬ್ರಾಂಡೆಡ್ ಮತ್ತು ಬ್ರಾಂಡ್ ದಿ ಗ್ರೇವ್ಯಾರ್ಡ್ ಎಂಬ 3 ಪ್ರಮುಖ ಸುತ್ತುಗಳಿದ್ದು, ಕಲೆ, ಸಂಗೀತ, ನೃತ್ಯ ಇತ್ಯಾದಿಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಭಾಗವಹಿಸುವ ತಂಡಗಳಿಗೆ ರಿದಮ್ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಪದವಿಪೂರ್ವ ಕಾಲೇಜುಗಳಿಂದ 18 ತಂಡಗಳು ಭಾಗವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net