

ಕುಂದಾಪುರ: ಕೃಷಿಯಲ್ಲಿ ನಿತ್ಯ ಹೊಸ ಪ್ರಯೋಗ ನಡೆಯುತ್ತಲೇ ಇರುತ್ತದೆ. ಕುಂದಾಪುರ ತಾಲೂಕು ಹಕ್ಲಾಡಿ ಗ್ರಾಮ ಬ್ರಹ್ಮೇರಿ ಮಂಜುನಾಥ ನಾಯ್ಕ ಗುಳ್ಳ ಹಾಗೂ ನಾಳಿ ಬದನೆ ಕೃಷಿಯಲ್ಲಿ ಮಲ್ಚಿಂಗ್ ವಿಧಾನ ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ.
ಕಲ್ಲಂಗಡಿ ಮೂಲಕ ಕುಂದಾಪುರ ತಾಲೂಕಿಗೆ ಪರಿಚಿತವಾದ ಮಲ್ಚಿಂಗ್ ವಿಧಾನ ಪ್ರಸ್ತುತ ವಿವಿಧ ತರಕಾರಿ ಕೃಷಿಯಲ್ಲಿಯೂ ಪ್ರಸಿದ್ಧಿ ಪಡೆದಿದೆ. ಪ್ರಾಯೋಗಿಕವಾಗಿ ತರಕಾರಿ ಕೃಷಿ ಮಾಡಿದ ನೂಜಾಡಿ ಬ್ರಹ್ಮೇರಿ ಮಂಜುನಾಥ ನಾಯ್ಕ ಯಶಸ್ಸು ಕಂಡುಕೊಂಡ ಕೃಷಿಕ. ಹೊದಿಕೆ ತಂತ್ರಜ್ಞಾನಕ್ಕೇ ಹೆಚ್ಚು ಒತ್ತು ನೀಡಿದ ನಾಯ್ಕ ಸತತವಾಗಿ ಬದನೆ, ಹೀರೆ ಮೊದಲಾದ ತರಕಾರಿ ಬೆಳೆದು ಲಾಭ ಗಳಿಸುತ್ತಿದ್ದಾರೆ.
ಬೇರೆ ಬೇರೆ ತರಕಾರಿಯನ್ನು ಮಲ್ಚಿಂಗ್ ಪದ್ಧತಿಯಲ್ಲಿ ಬೆಳೆದು ಯಶಸ್ಸು ಕಂಡ ಬೆನ್ನಿಗೆ ಗುಳ್ಳ ಮತ್ತು ನಾಳಿ ಬದನೆ ಹೊದಿಕೆ ವಿಧಾನದಲ್ಲಿ ಬೆಳೆದಿದ್ದಾರೆ. ಒಳ್ಳೆಯ ಇಳುವರಿ ಕೂಡಿ ಕಂಡುಕೊಂಡಿದ್ದಾರೆ. ಸ್ಥಳೀಯ ಪ್ರಭೇದ ಸಣ್ಣ ಗುಳ್ಳ ಹಾಗೂ ಸುಧಾರಿತ ಉದ್ದ ಬದನೆ ಕೂಡ ಹೊದಿಕೆ ವಿಧಾನದಲ್ಲಿ ಹುಲುಸಾಗಿ ಬೆಳೆದಿದೆ. ಸಹಜ ಪದ್ಧತಿಗೂ ಹೊದಿಕೆ ಪದ್ಧತಿಗೂ ಸಾಕಷ್ಟು ವ್ಯತ್ಯಾಸ ಗಮನಿಸಿರುವ ಮಂಜುನಾಥ ನಾಯ್ಕ ಹೊದಿಕೆ ವಿಧಾನ ಕೃಷಿಕರಿಗೆ ಹೆಚ್ಚು ಉಪಯುಕ್ತ ಎನ್ನುತ್ತಾರೆ.
ಕೃಷಿಯಲ್ಲಿ ಹೊಸ ವಿಧಾನ, ತಂತ್ರಜ್ಞಾನ ಅಳವಡಿಕೆ, ಸಮಗ್ರ ಕೃಷಿ ಸಾಧನೆಗೆ ಕೃಷಿ ಇಲಾಖೆಯಿಂದ ಪ್ರಶಸ್ತಿ, ಸಬ್ಲಾಡಿ ಶೀನಪ್ಪ ಶೆಟ್ಟಿ ಕೃಷಿ ಪ್ರಶಸ್ತಿ ಪಡೆದಿರುವ ಮಂಜುನಾಥ್ ನಾಯ್ಕ ಅವರಂತಹ ಕೃಷಿಕರ ಹೊಸತನ ತುಡಿತ, ಆಸಕ್ತಿ ಕೃಷಿ ಕ್ಷೇತ್ರಕ್ಕೆ ವರದಾನ ಆಗುತ್ತದೆ. ರೈತರು ಹೆಚ್ಚಿನ ಮಾಹಿತಿಗೆ 9686797511 ಸಂಪರ್ಕಿಸಬಹುದು.
ಫಲವತ್ತತೆ ನಿರ್ವಹಣೆ: ಮಲ್ಚಿಂಗ್ ವಿಧಾನದಿಂದ ತೇವಾಂಶ ಆವಿಯಾಗುವುದು ತಡೆದು ಗಿಡಗಳಿಗೆ ನೀಡುತ್ತದೆ. ಮಣ್ಣಿನ ಸವಕಳಿ ತಪ್ಪುತ್ತದೆ. ಮೇಲ್ಮಣ್ಣಿನ ಫಲವತ್ತತೆ ನಿರ್ವಹಣೆಯಾಗುತ್ತದೆ. ಪೋಷಕಾಂಶಗಳು ನೇರ ಗಿಡಗಳಿಗೆ ತಲುಪುತ್ತದೆ. ಕಳೆ ಬೆಳೆಯಲು ಅವಕಾಶ ಇರುವುದಿಲ್ಲ. ರೋಗ, ಕೀಟ ಬಾಧೆ ಗಣನೀಯವಾಗಿ ಕಡಿಮೆಯಾಗುತ್ತದೆ. ಡ್ರಿಪ್ ಮೂಲಕ ನೀರಾವರಿ ಕಲ್ಪಿಸುವುದರಿಂದ ಶೇ.60ರಷ್ಟು ನೀರು ಉಳಿತಾಯವಾಗುತ್ತದೆ. ಪೋಷಕಾಂಶಗಳು ಪೋಲಾಗುವುದಿಲ್ಲ. ಜತನವಾಗಿ ಹೊದಿಕೆಯನ್ನು ತಗೆದರೆ ಇನ್ನೊಮ್ಮೆ ಬಳಸಲು ಸಾಧ್ಯವಿದೆ.
ಹೊದಿಕೆ ವಿಧಾನದಿಂದ ಶ್ರಮ ಉಳಿತಾಯ, ನೀರಿನ ಉಳಿತಾಯ, ಕಳೆ ಇರುವುದಿಲ್ಲ, ಪೋಷಕಾಂಶಗಳು ಹಾಳಾಗುವುದಿಲ್ಲ. ನಾವು ನೀಡಿದ ನಿರ್ದಿಷ್ಟ ಗೊಬ್ಬರ, ಲಘು ಪೋಷಕಾಂಶ ನೇರ ಗಿಡಗಳಿಗೆ ಸಿಗುತ್ತದೆ. ಆಸಕ್ತಿ ಶೃದ್ಧೆಯಿಂದ ಮಾಡಿದರೆ ಸಹಜ ಪದ್ಧತಿಗಿಂತ ಒಳ್ಳೆಯ ಆದಾಯ ಸಾಧ್ಯವಿದೆ. ಮಂಜುನಾಥ್ ನಾಯ್ಕ, ಕೃಷಿಕ