ಧರೆಗುರುಳಿದ್ದ ಮರಗಳಿಗೆ ಮರುಜೀವ: ಪರಿಸರ ಪ್ರೇಮಿಗಳಿಂದ ಮಾದರಿ ಕಾರ್ಯ

34
Published on

ಮಳೆ ಮತ್ತು ಗಾಳಿಯಿಂದ ಕುಕ್ಕರಹಳ್ಳಿ ಕೆರೆಯ ದಂಡೆಯಲ್ಲಿ ಧರೆಗುರುಳಿದ್ದ ನಾಲ್ಕು ಮರಗಳನ್ನು ಪರಿಸರ ಪ್ರೇಮಿಗಳು ಶುಕ್ರವಾರ ಮತ್ತೆ ನೆಡುವ ಮೂಲಕ ಮರು ಜೀವ ನೀಡಿದ್ದಾರೆ.

ಬುಧವಾರ ರಾತ್ರಿ ಕುಕ್ಕರಹಳ್ಳಿ ಕೆರೆ ದಡದಲ್ಲಿ ನಾಲ್ಕು ಆಕಾಶ ಮಲ್ಲಿಗೆ ಮರಗಳು ಧರೆಗುರುಳಿದ್ದವು. ಮೈಸೂರು ವಿವಿಯ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬಿದ್ದ ಮರಗಳನ್ನು ಕಡಿದು ತೆರವುಗೊಳಿಸಲು ತೀರ್ಮಾನಿಸಿದ್ದರು. ಇದನ್ನು ಮನಗಂಡ ಮೈಸೂರಿನ ಪರಿಸರ ಉಳಿವಿಗಾಗಿ ಕ್ರಿಯಾ ಸಮಿತಿ ಹಾಗೂ ಹಸಿರು ಪಡೆಯ 30ಕ್ಕೂ ಹೆಚ್ಚು ಸದಸ್ಯರು ಮೈಸೂರು ವಿವಿಯ ಕುಲಪತಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಬುಡಸಮೇತ ಬಿದ್ದ ಮರಗಳನ್ನು ಮರು ನೆಡುವ ವಿಚಾರವನ್ನು ಪ್ರಸ್ತಾಪಿಸಿದರು. ಅಂತಿಮವಾಗಿ ಒಪ್ಪಿಗೆ ಸಿಕ್ಕ ಕೂಡಲೇ ಸದಸ್ಯರು ತಮ್ಮತಮ್ಮಲ್ಲೇ ಹಣ ಸಂಗ್ರಹಿಸಿ ಬಿದ್ದ ಮರಗಳನ್ನು ಮತ್ತೆ ನೆಟ್ಟು ನೆಮ್ಮದಿ ನಿಟ್ಟುಸಿರು ಬಿಟ್ಟರು.

ಈ ಹಿಂದೆ 2019ರಲ್ಲಿ ಅಗ್ರಹಾರದಲ್ಲಿದ್ದ ಮರವೊಂದನ್ನು ಬುಡ ಸಮೇತ ಕಡಿಯಲಾಗಿತ್ತು. ಬಳಿಕ ನಗರಪಾಲಿಕೆ ಸಹಯೋಗದೊಂದಿಗೆ ಆ ಮರಗಳನ್ನು ಆರ್‌ಐಇ (ಪ್ರಾದೇಶಿಕ ಶಿಕ್ಷಣ ಸಂಸ್ಥೆ ) ಕ್ಯಾಂಪಸ್ ಒಳಗೆ ನೆಡಲಾಗಿತ್ತು. ಆದರೆ, ನಿರ್ವಹಣೆ ಕೊರತೆಯಿಂದ ಅದು ಮತ್ತೆ ಚಿಗುರಲಿಲ್ಲ. ಇದೀಗ ಮತ್ತೆ ಹೊಸ ಪ್ರಯೋಗವನ್ನು ವೈಜ್ಞಾನಿಕವಾಗಿ ಮಾಡಲಾಗಿದೆ. ಮೈಸೂರಿನಲ್ಲಿ ಪರಿಸರ ಪ್ರೇಮಿಗಳು ಮಾದರಿ ನಡೆ ಅನುಸರಿಸಿದ್ದು ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ.

ಇದೇ ವೇಳೆ ಪರಿಸರ ಬಳಗದ ಪರಶುರಾಮೇಗೌಡ ಮಾತನಾಡಿ, ಇದೆ ಮೊದಲ ಬಾರಿಗೆ ಪರಿಸರ ಉಳಿವಿಗಾಗಿ ಕ್ರಿಯಾ ಸಮಿತಿ, ಪರಿಸರ ಬಳಗ, ಟೀಂ ಮೈಸೂರು, ಲೆಟ್ಸ್ ಡು ಇಟ್, ಗ್ರಾಹಕ ಪರಿಷತ್ ಸೇರಿದಂತೆ ಇನ್ನೂ ಹಲವು ಪರಿಸರ ಸಂಘಗಳ ಸದಸ್ಯರು ವಿವಿ ಕುಲಪತಿ ಪ್ರೊ.ಎನ್.ಕೆ ಲೋಕನಾಥ್ ಅವರಿಗೆ ಮಾಹಿತಿ ನೀಡಿ, ತೋಟಗಾರಿಕಾ ಇಲಾಖೆ ನಿವೃತ್ತ ನಿರ್ದೇಶಕ ಡಾ.ರಾಮಕೃಷ್ಣ ಹಾಗೂ ಮೈಸೂರು ವಿವಿಯ ತೋಟಗಾರಿಕಾ ಇಲಾಖೆ ಅಧಿಕಾರಿ ಮುಜಾರ್ ಅವರ ನೇತೃತ್ವದಲ್ಲಿ ಹೊಸ ಪ್ರಯೋಗ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಹಸಿರು ಪಡೆ ಸದಸ್ಯ ಕಮಲಗೋಪಿನಾಥ್ ಮಾತನಾಡಿ, ಜಪಾನ್ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಮರಗಳನ್ನು ಸ್ಥಳಾಂತರಿಸಿ ಮರು ನೆಡಲಾಗಿರುವ ಕಾರ್ಯ ಯಶಸ್ವಿಯಾಗಿದೆ. ಹಾಗಾಗಿ ನಾವು ಅದೇ ಮಾದರಿಯಲ್ಲಿ ಮೊದಲ ಬಾರಿಗೆ ಈ ಪ್ರಯೋಗ ಮಾಡಿದ್ದೇವೆ. ಮರಗಳ ಉಳಿಸಿ ಅಭಿವೃದ್ದಿ ಮಾಡಬಹುದು ಎಂಬುದರ ಅರಿವು ಮೂಡಿಸಲು ಈ ಪ್ರಯೋಗ ಮಾಡಲಾಗಿದೆ. ಸ್ಥಳ ಪರಿಶೀಲನೆ ನಡೆಸಿ ಮರಗಳ ಮರುಸ್ಥಾಪನೆ ಸಾಧ್ಯ ಎಂದು ತಿಳಿದ ಬಳಿಕವೇ ವೃಕ್ಷ ನೆಡಲಾಗಿದೆ ಎಂದು ತಿಳಿಸಿದರು.

ಪರಿಸರ ಬಳಗದ ಎಂ. ಗಂಟಯ್ಯ, ಲೀಲಾ ವೆಂಕಟೇಶ್, ಭಾಗ್ಯ ಶಂಕರ್, ಕಲಾ, ಭಾನು ಪ್ರಶಾಂತ್, ಅರುಣ್‌ಕುಮಾರ್, ಕಾಮಾಕ್ಷಿ, ಶ್ರೀಲಕ್ಷ್ಮೀ, ವರ್ಷಿಣಿ, ಡಾ.ರಾಮಕೃಷ್ಣ, ವಿಶ್ವನಾಥ್, ವಸಂತಕುಮಾರ್ ಮೈಸೂರುಮಠ್, ಶಂಕರ್, ಅಕ್ಬರ್, ಕಸ್ತೂರಿ, ದೇವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net