

ಮೈಸೂರು: ಶಿಕ್ಷಕರು ಆಶ್ರಮ ಶಾಲೆಯ ಮಕ್ಕಳನ್ನು ಮಾನಸಿಕವಾಗಿ ದೈಹಿಕವಾಗಿ ಸದೃಢರನ್ನಾಗಿ ಮಾಡುವುದರ ಜತೆಗೆ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ.ಪುಷ್ಪಾವತಿ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ನಿಲಯ ಮೇಲ್ವಿಚಾರಕರು ಹಾಗೂ ಆಶ್ರಮ ಶಾಲೆಗಳ ಶಿಕ್ಷಕರಿಗಾಗಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಆರೋಗ್ಯದ ಮೇಲ್ವಿಚಾರಣೆ ಮತ್ತು ಮಾನಸಿಕ ಒತ್ತಡ ನಿರ್ವಹಣೆ ಕುರಿತ ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಮುದಾಯದತ್ತ ಹೋಗುವುದು ನಮ್ಮ ಗುರಿಯಾಗಿದೆ. ಆ ಗುರಿಯನ್ನು ತಲುಪಿ ಆರೋಗ್ಯವಾಗಿರುವ ಮಕ್ಕಳನ್ನು ದೇಶಕ್ಕೆ ಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಾಡಿ ಮಕ್ಕಳ ಕಡೆ ಶಿಕ್ಷಕರು ಹೆಚ್ಚು ಗಮನ ಕೊಡುವುದರ ಜತೆಗೆ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ನಿಮ್ಮ ಮಕ್ಕಳಂತೆ ಕಾಣಬೇಕು. ಏಷ್ಯನ್ ಕ್ರೀಡೆಗಳಲ್ಲಿ ಗಿರಿಜನ ಮಕ್ಕಳು ಮುಂದೆ ಇರುತ್ತಾರೆ. ಅಂತಹ ಮಕ್ಕಳನ್ನು ಗುರುತಿಸಬೇಕು ಎಂದು ಹೇಳಿದರು.
ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದ್ದು, ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮವಾಗಿದೆ. ನಮ್ಮ ಸಂಸ್ಥೆಯಿಂದಲೂ ಆಶ್ರಮ ಶಾಲೆ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ ಮಾಡಲಿದ್ದು, ಎಲ್ಲ ಸಹಕಾರ ನೀಡುತ್ತೇವೆ ಎಂದರು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎಲ್. ಶ್ರೀನಿವಾಸ್ ಮಾತನಾಡಿ, ನಮ್ಮ ಸಂಸ್ಥೆ ಈಗಾಗಲೇ 11 ಆಶ್ರಮ ಶಾಲೆಗಳ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದ ಆಶ್ರಮ ಶಾಲೆಗಳಲ್ಲಿಯೂ ಆರೋಗ್ಯ ತಪಾಸಣೆ ನಡೆಸಲಾಗುವುದು. ಇದಕ್ಕೆ ಎಲ್ಲ ವೈದ್ಯರು ಹಾಗೂ ಆರೋಗ್ಯ ಸಂಸ್ಥೆಗಳು ಸಹಕಾರ ನೀಡಬೇಕು. ಆಶ್ರಮ ಶಾಲಾ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳನ್ನು ಮಾಡಲು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ನಮ್ಮ ಎಲ್ಲ ತರಬೇತಿ ಕಾರ್ಯಕ್ರಮಗಳಲ್ಲೂ ಶಿಕ್ಷಕರು ಭಾಗವಹಿಸಬೇಕು ಎಂದರು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕ ಬಿ.ಎಸ್.ಪ್ರಭಾ ಅರಸ್, ವೈದ್ಯರಾದ ಡಾ. ರವೀಶ್‌ಗಣಿ, ಡಾ. ಎಸ್.ಎನ್.ಪ್ರಶಾಂತ್, ಡಾ. ಸಂದೀಪ್, ಡಾ. ಮೋಹನ್‌ಕುಮಾರ್, ಡಾ. ಇಂದಿರಾ, ಡಾ.ಎಂ.ಎಸ್.ಗಿರೀಶ್, ತಾಲೂಕು ಕಲ್ಯಾಣಾಧಿಕಾರಿಗಳಾದ ಬಸವರಾಜು, ನಾರಾಯಣಸ್ವಾಮಿ, ಅರುಣ್‌ಪ್ರಭು, ಅಶೋಕ್ ಇದ್ದರು.