

ರಾಯಚೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಸಿದಂತೆ ದೇಶ ಬಿಟ್ಟು ಪರಾರಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಸಿ ದೇಶಕ್ಕೆ ಕರೆತರಬೇಕು ಎಂದು ಒತ್ತಾಯಿಸಿ ಸ್ಥಳೀಯ ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ಮಹಿಳಾ ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಪೊರಕೆ ಹಿಡಿದು ಪ್ರಜ್ವಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ಪ್ರಜ್ವಲ್ ನಡೆಸಿರುವುದು ವಿಕೃತ ಕೆಲಸವಾಗಿದ್ದು, ಹಲವಾರು ಮಹಿಳೆಯರ ಬದುಕನ್ನು ನಾಶ ಮಾಡುವ ಕೆಲಸವನ್ನು ಮಾಡಿದ್ದಾನೆ. ಕೂಡಲೇ ಆತನ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು.
ಮಹಿಳೆಯರ ರಕ್ಷಣೆ ಬಗ್ಗೆ ಮಾತನಾಡುವ ಬಿಜೆಪಿ ಪ್ರಜ್ವಲ್ ಪ್ರಕರಣದ ಬಗ್ಗೆ ಮಾತನಾಡದೆ ವೌನ ವಹಿಸಿರುವುದು ಖಂಡನಿಯ. ಪ್ರಜ್ವಲ್ ದೇಶ ಬಿಟ್ಟು ಪರಾರಿಯಾಗುವಲ್ಲಿ ಬಿಜೆಪಿ ನಾಯಕರು ಬೆಂಬಲ ನೀಡಿದ್ದಾರೆ. ಜೆಡಿಎಸ್ ಜತೆಗೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವುದಕ್ಕೆ ಬಿಜೆಪಿ ನಾಯಕರು ವೌನವಾಗಿದ್ದಾರೆ.
ಪ್ರಕರಣಕ್ಕೆ ಸಂಬಂಸಿದಂತೆ ರಾಜ್ಯ ಸರ್ಕಾರ ಎಸ್‌ಐಟಿ ತಂಡಕ್ಕೆ ತನಿಖೆಯ ಜವಾಬ್ದಾರಿ ವಹಿಸಿದ್ದು, ವಿದೇಶದಲ್ಲಿರುವ ಪ್ರಜ್ವಲ್‌ನ ಕರೆತರಲು ಕೇಂದ್ರ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಘಟಕದ ಪದಾಕಾರಿಗಳಾದ ಶ್ರೀದೇವಿ ನಾಯಕ, ಜಯಲಕ್ಷ್ಮಿ, ಶಶಿಕಲಾ ಭೀಮರಾಯ, ರಾಣಿ ರಿಚರ್ಡ್, ಮಂಜುಳಾ ಅಮರೇಶ, ಪದ್ಮಾವತಿ, ರಾಜೇಶ್ವರಿ, ನವನೀತಾ ಆದೋನಿ, ರಜೀಯಾ ಸುಲ್ತಾನ್ ಪಾಲ್ಗೊಂಡಿದ್ದರು.