

ಶಿರಸಿ: ಅಡಕೆಗೆ ಕೊಳೆ ರೋಗ, ಎಲೆಚುಕ್ಕಿ ರೋಗ ತೀವ್ರವಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ಅಡಕೆ ಆಮದಿಗೆ ಅನುಮತಿ ನೀಡಿದ್ದು ಸೂಕ್ತವಲ್ಲ. ಅಡಕೆ ಬೆಳೆಯುವ ಕ್ಷೇತ್ರಗಳ ಸಂಸದರು ಪ್ರಧಾನಿ ನರೇಂದ್ರ ಮೋದಿ ಹಾಗೂ ವಾಣಿಜ್ಯ ಸಚಿವರ ಮೇಲೆ ಒತ್ತಡ ತಂದು ಆಮದನ್ನು ನಿಷೇಧಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಜಿಲ್ಲೆಯ ಮಲೆನಾಡು ಭಾಗದ ರೈತರು ಅಡಕೆ ಬೆಳೆ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ಅಡಕೆ ಮತ್ತು ಕಾಳು ಮೆಣಸು ಆಮದು ಅವ್ಯಾಹತವಾಗಿ ನಡೆದು ದರವೂ ಕುಸಿತವಾಗಿದೆ. ಈ ವರ್ಷ ವಾಡಿಕೆಗಿಂತ ಜಾಸ್ತಿ ಮಳೆಯಾಗಿದೆ. ಸಂಪೂರ್ಣ ಮಲೆನಾಡು ಭಾಗದಲ್ಲಿ ಕೊಳೆ ರೋಗ ಬಂದು ಶೇ.60ರಷ್ಟು ಅಡಕೆ ಬೆಳೆ ಹಾನಿ ಆಗಿದೆ. ಜಿಲ್ಲೆಯ ಅಡಕೆ ಕೊಳೆ ರೋಗದ ಮಾಹಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದು, ಪರಿಹಾರ ವಿತರಿಸುವಂತೆ ವಿನಂತಿ ಮಾಡಿದ್ದೇನೆ ಎಂದರು.
ಶಾಂತಾರಾಮ ಹೆಗಡೆ ಟಿಎಸ್‌ಎಸ್ ಅಧ್ಯಕ್ಷರಾಗಿದ್ದ ವೇಳೆ ನಿಯೋಗ ತೆರಳಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿದ್ದರಿಂದ ಅಂದು ಆಮದು ನಿಷೇಧಿಸಿದ್ದರು. ಆಗ ಅಡಕೆಗೆ ಉತ್ತಮ ದರ ಬಂದಿತ್ತು. ಈ ವರ್ಷ ಅಡಕೆ ಬೆಳೆ ಹಾನಿಯಾಗಿದ್ದರೂ ಕೇಂದ್ರ ಸರ್ಕಾರ ಆಮದಿಗೆ ಮುಂದಾಗಿದೆ. ಅಡಕೆ ಬೆಳೆಗಾರರಾಗಿ ಪಾರ್ಲಿಮೆಂಟ್‌ನಲ್ಲಿ ಧ್ವನಿ ಎತ್ತದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಭೀಮಣ್ಣ, ಇತ್ತೀಚಿನ ದಿನಗಳಲ್ಲಿ ಅಕ್ರಮ ಅಡಕೆ ಆಮದು ಜಾಸ್ತಿಯಾಗಿದೆ. ವ್ಯಾಪಾರಸ್ಥರೂ ಮಲೆನಾಡಿನ ಅಡಕೆಯೊಂದಿಗೆ ವಿದೇಶಿ ಅಡಕೆ ಮಿಶ್ರಗೊಳಿಸುವ ಪ್ರಕರಣ ವರದಿಯಾಗುತ್ತಿದೆ. ವ್ಯಾಪಾರಸ್ಥರು ಇಂತಹ ಕೃತ್ಯ ನಡೆಸಿ ರೈತರಿಗೆ ಅನ್ಯಾಯ ಮಾಡಬಾರದು ಎಂದರು.
ಎಲೆ ಚುಕ್ಕಿ ರೋಗದ ಕುರಿತ ಪ್ರತಿಕ್ರಿಯಿಸಿದ ಭೀಮಣ್ಣ ನಾಯ್ಕ, ಔಷಧ ಉತ್ಪಾದನಾ ಕಂಪನಿಗಳು ರೈತರ ತೋಟಕ್ಕೆ ತೆರಳಿ ಪರಿಶೀಲನೆ ಮಾಡಿದ ಬಳಿಕವೇ ಔಷಧ ಉತ್ಪಾದನೆ ಮಾಡುವಂತೆ ಸೂಚಿಸಿದ್ದೇವೆ. ಈ ಕುರಿತಂತೆ ಶೀಘ್ರವೇ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಿದ್ದೇನೆ ಎಂದರು.
ಪ್ರಮುಖರಾದ ವೆಂಕಟೇಶ ಹೆಗಡೆ ಹೊಸಬಾಳೆ, ಎಸ್.ಕೆ. ಭಾಗ್ವತ್, ಜಗದೀಶ ಗೌಡ, ಪ್ರದೀಪ ಶೆಟ್ಟಿ, ಜ್ಯೋತಿ ಗೌಡ ಪಾಟೀಲ ಇತರರಿದ್ದರು.
ವಿದೇಶದಿಂದ ಅಡಕೆ ಆಮದಾದರೆ ಇಲ್ಲಿನ ರೈತರ ಸ್ಥಿತಿ ಏನಾಗುತ್ತದೆ ಎಂದು ಸಂಸದರು ಸಂಸತ್ತಿನಲ್ಲಿ ಮನವರಿಕೆ ಮಾಡಿಕೊಡಬೇಕು. ಅಗತ್ಯವಿಲ್ಲದಿದ್ದರೂ ಹೊರದೇಶದಿಂದ ತರಿಸಿಕೊಳ್ಳುವ ಕೇಂದ್ರದ ಕಾರ್ಯ ರೈತರಿಗೆ ಮಾಡುತ್ತಿರುವ ಮೋಸ. ಭೀಮಣ್ಣ ನಾಯ್ಕ, ಶಾಸಕ