ಮಕ್ಕಳಲ್ಲಿರುವ ಸೃಜನಶೀಲತೆ ಹೊರತನ್ನಿ

12 SARAG 1
ಸರಗೂರು ತಾಲೂಕಿನ ಹಳಿಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿತ್ರಕಲೆ ಸ್ಪರ್ಧೆ ಕಾರ್ಯಕ್ರಮವನ್ನು ಶಿಕ್ಷಣ ಸಂಯೋಜಕ ಪುರುಷೋತ್ತಮ್ ಉದ್ಘಾಟಿಸಿದರು. ಪುರುಷೋತ್ತಮ್, ರಂಗನಾಥ್, ಸುಬ್ಬುರಾವ್ ಇದ್ದರು.
Published on

 ಸರಗೂರು: ಪಠ್ಯ-ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳಲ್ಲಿರುವ ಸೃಜನಶೀಲತೆ ಹೊರತರುವ ಕಾರ್ಯವನ್ನು ಶಿಕ್ಷಕರು ಬದ್ಧತೆಯಿಂದ ಮಾಡಬೇಕು ಎಂದು ಶಿಕ್ಷಣ ಸಂಯೋಜಕ ಪುರುಷೋತ್ತಮ್ ಸಲಹೆ ನೀಡಿದರು.

ತಾಲೂಕಿನ ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳಿಯೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣ ಪಡೆಯುವ ಮೂಲಕ ಜೀವನದ ವಿಶಾಲ ಗುರಿ ಈಡೇರಿಸಿಕೊಳ್ಳಲು ಸಿದ್ಧರಾಗಬೇಕು ಎಂದು ಕಿವಿಮಾತು ಹೇಳಿದರು.

ಶಿಕ್ಷಕ ರಂಗನಾಥ್ ಮಾತನಾಡಿ, ಚಿತ್ರಗಳೆಂದರೆ ಕೇವಲ ಬಣ್ಣ ತುಂಬುವುದಿಲ್ಲ. ಪ್ರತಿಚಿತ್ರವೂ ಸಾವಿರ ಭಾವನೆಗಳ ಗಣಿ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ವಿದ್ಯಾರ್ಥಿಗಳು ಬಾಲ್ಯದಿಂದಲೇ ಬಹುಮುಖ ವ್ಯಕ್ತಿತ್ವ ಹೊಂದುವ ಮೂಲಕ ಸಾಮಾಜದ ಸವಾಲುಗಳನ್ನು ಎದುರಿಸಲು ಜಾಗೃತವಾಗಿರಬೇಕು ಎಂದರು.

ಮುಖ್ಯಶಿಕ್ಷಕ ಎಸ್.ವಿ.ಸುಬ್ಬು ರಾವ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಉತ್ಸಾಹದಿಂದ ಚಿತ್ರಕಲೆ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಶಿಕ್ಷಕರು ಅನೀಲ್, ಸಹನಾ, ಶಾಲಾ ಮುಖ್ಯಮಂತ್ರಿ ಶೌರ್ಯ, ಉಪಮುಖ್ಯಮಂತ್ರಿ ಪ್ರೇರಣಾ, ಮಾಯಾವತಿ, ಮಕ್ಕಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net