

ನಂಜನಗೂಡು: ಕಾವೇರಿ ನೀರನ್ನು ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಹರಿಸದೆ ತಮಿಳುನಾಡಿಗೆ ಹರಿಸುವ ಮೂಲಕ ರೈತರಿಗೆ ಕೈಗೆ ಚೊಂಬು ಕೊಟ್ಟ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.
ತಾಲೂಕಿನ ಹದಿನಾರು ಗ್ರಾಮದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಪರವಾಗಿ ಸೋಮವಾರ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿದರು. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿರುವ ಕಷ್ಟ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ನೀರು ಹರಿಸುವ ಜರೂರಾದರೂ ಏನಿತ್ತು ಎಂದು ವರುಣ ಕ್ಷೇತ್ರವನ್ನು ಪ್ರತಿನಿಧಿಸುವ ಸಿಎಂ ಸಿದ್ದರಾಮಯ್ಯ ಹಾಗೂ ಹದಿನಾರು ಗ್ರಾಮದವರೇ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಪ್ರಶ್ನಿಸಲು ಬಯಸುತ್ತೇನೆ. ವರುಣ ಕ್ಷೇತ್ರ ವ್ಯಾಪ್ತಿಯಲ್ಲೇ ಕಬಿನಿ ಜಲಾಶಯದ ಎರಡು ನಾಲೆಗಳಿವೆ. ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಶಕ್ತಿ ಕೊಟ್ಟ ವರುಣ ಕ್ಷೇತ್ರದ ನಾಲೆಗಳಿಗೆ ನೀರು ಹರಿಸಿದ್ದರೆ ರೈತರು ನೆಮ್ಮದಿಯಾಗಿರುತ್ತಿದ್ದರು. ತಮಿಳುನಾಡಿಗೆ ನೀರು ಬಿಡುವ ಅಗತ್ಯವೇನಿತ್ತು ಎಂಬ ಪ್ರಶ್ನೆಗೆ ಉಭಯ ನಾಯಕರು ಉತ್ತರಿಸಲಿ ಎಂದರು.
ಇಡೀ ರಾಜ್ಯದ ಜನ ನನ್ನನ್ನು ಗುರುತಿಸುತ್ತಾರೆ ಎಂದರೆ ಅದಕ್ಕೆ ವರುಣ ವಿಧಾನಸಭಾ ಕ್ಷೇತ್ರ ಮತದಾರರು ಕಾರಣ. ನೀವು ತೋರಿದ ಪ್ರೀತಿ ವಿಶ್ವಾಸದ ಪರಿಣಾಮ ಪ್ರಧಾನಿ ನರೇಂದ್ರ ಮೋದಿ ಅವರು ನನ್ನನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ವರುಣ ವಿಧಾನಸಭಾ ಕ್ಷೇತ್ರಕ್ಕೆ 20 ಕೋಟಿ ರೂ. ವಿಶೇಷ ಅನುದಾನವನ್ನು ಕೊಟ್ಟಿದ್ದರು. ಆದರೆ, ಅದಕ್ಕೆ ಅಂದಿನ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಡೆಹಿಡಿಯುವ ಕೆಲಸ ಮಾಡಿದ್ದರು ಎಂದು ಆಪಾದಿಸಿದರು.
ಮೈಸೂರಿನ ರಾಜಮನೆತನಕ್ಕೂ, ಹದಿನಾರು ಗ್ರಾಮಕ್ಕೂ ಭಾವನಾತ್ಮಕ ಸಂಬಂಧವಿದೆ. ಮೈಸೂರು ರಾಜರಿಗೆ ಆರಂಭದಲ್ಲಿ ಯದುನಾಡು ರಾಜಧಾನಿಯಾಗಿತ್ತು. ಯದುನಾಡು ಕ್ರಮೇಣ ಹದಿನಾರು ಗ್ರಾಮವಾಗಿದೆ. ಇಂತಹ ಹಿನ್ನೆಲೆಯುಳ್ಳ ಈ ಭಾಗದಲ್ಲಿ ಚಾಮರಾಜನಗರ ಅಭ್ಯರ್ಥಿ ಎಸ್.ಬಾಲರಾಜು ಅವರನ್ನು ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬುವಂತೆ ಮನವಿ ಮಾಡಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಮಾತನಾಡಿ, ಹದಿನಾರು ಗ್ರಾಮಕ್ಕೂ, ನಮ್ಮ ವಂಶಕ್ಕೂ ಇರುವ ನಂಟಿನ ಬಗ್ಗೆ ನಿಮೆಗೆಲ್ಲ ತಿಳಿದಿದೆ. ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಾಗಿದೆ. ಇದಕ್ಕಾಗಿ ಪ್ರತಿ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಅಗತ್ಯವಿದೆ. ದೇಶದ ಸಮಗ್ರತೆ ದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಮತದಾರರು ಮುಂದಾಗಬೇಕು ಎಂದರು.
ಗ್ರಾಮದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಲಾಯಿತು. ವಿವಿಧ ಜನಪದ ಕಲಾತಂಡಗಳು ಭಾಗಿಯಾಗಿದ್ದವು. ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಎನ್.ಸದಾನಂದ, ಗುರುಸ್ವಾಮಿ, ಗುರುಪಾದಸ್ವಾಮಿ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಿ.ಎಂ.ಮಹದೇವಯ್ಯ, ವರುಣ ಬಿಜೆಪಿ ಅಧ್ಯಕ್ಷ ಸತೀಶ್, ನಾಗೇಂದ್ರ ಇತರರಿದ್ದರು.