

ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆ ಸದಾಕಾಲ ಜೀವಂತವಾಗಿದ್ದು, ಅದರ ಅನುಷ್ಠಾನಕ್ಕಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.
ವಿದ್ಯಾರಣ್ಯಪುರಂನಲ್ಲಿರುವ ಶಾಸಕರ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕೃಷ್ಣರಾಜ ಕ್ಷೇತ್ರದ ಮಹಿಳಾ ಮೋರ್ಚಾದ ಬೂತ್ ಅಧ್ಯಕ್ಷರು ಹಾಗೂ ಬೂತ್ ಪ್ರಭಾರಿಗಳ ಚುನಾವಣಾ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶ ಸೇವೆ ಮಾಡಲು ಹಾಗೂ ಮೋದಿಯವರ ಚಿಂತನೆಗಳನ್ನು ಕಾರ್ಯಗತಗೊಳಿಸಲು ನಾವಿಂದು ಸೇರಿದ್ದೆವೆ. ಅಭಿವೃದ್ಧಿಯ ವಿಚಾರವನ್ನು ಮುಂದಿಟ್ಟುಕೊ ಂಡು ಮತದಾರರ ಬಳಿ ಮತಯಾಚಿಸೋಣ ಎಂದರು.
ನೀವು ಮನೆ ಮನೆಗೆ ಹೋದಾಗ ಕೆಲವರು ನಿಮ್ಮ ಮನಸ್ಸಿಗೆ ನೋವಾಗುವ ರೀತಿ ಮಾತನಾಡಿದರೆ ಬೇಸರ ಮಾಡಿಕೊಳ್ಳದೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಆಗಿರುವ ಕೆಲಸಗಳ ಬಗ್ಗೆ ಮನವರಿಕೆ ಮಾಡಿಕೊಡಿ. ಅದಕ್ಕಾಗಿಯೇ ರೂಪಿಸಲಾಗಿರುವ ಪುಸ್ತಕವನ್ನು ದಾಖಲೆ ರೂಪದಲ್ಲಿ ಅವರ ಕೈಗಿಡಿ ಎಂದು ಹೇಳಿದರು.
ಹೆಣ್ಣುಮಕ್ಕಳಿಗೆ ತಾಳ್ಮೆ ಹಾಗೂ ಚಾತುರ್ಯ ಹೆಚ್ಚು. ಆ ಕಾರಣಕ್ಕಾಗಿಯೇ ಇಂದು ಎಷ್ಟೋ ಕುಟುಂಬಗಳು ನೆಮ್ಮದಿಯ ಬದುಕು ಸಾಗಿಸುತ್ತಿವೆ. ನೀವು ಪಕ್ಷದ ಕಾರ್ಯ ನಿಮಿತ್ತ ಮನೆಗಳಿಗೆ ಹೋದ ವೇಳೆ ಆ ಕುಟುಂಬದೊಂದಿಗಿನ ಬಾಂಧವ್ಯ ಹೆಚ್ಚಿಸಿಕೊಳ್ಳಿ. ಆ ಮೂಲಕ ಅವರ ಕಷ್ಟ ಸುಖದಲ್ಲಿ ಭಾಗಿಯಾಗಿ ಎಂದರು.
ಮೇ 10 ರಂದು ಚುನಾವಣೆ, 13 ರಂದು ಫಲಿತಾಂಶ ಹೊರ ಬೀಳಲಿದೆ. ಆ ಫಲಿತಾಂಶದ ಒಂದೊಂದು ಅಂಕವೂ ನಿಮ್ಮ ಶ್ರಮದ ಫಲವಾಗಿರಲಿದೆ. ಉತ್ತಮ ಭಾರತಕ್ಕಾಗಿ ಹಾಗೂ ಭವಿಷ್ಯದ ಕರ್ನಾಟಕಕ್ಕಾಗಿ ನಿಮ್ಮ ಶ್ರಮ ಈಗ ಅನಿವಾರ್ಯ ಎಂದು ಹೇಳಿದರು.