ರೈತರಿಗಾಗಿ ಭೂ ಸುಧಾರಣೆಯಲ್ಲಿ ತಿದ್ದುಪಡಿ ತನ್ನಿ

k-b-prasanna-kumar
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್
Published on

ಶಿವಮೊಗ್ಗ: ನಗರದ ಹೊರವಲಯದ ಸಕ್ಕರೆ ಕಾರ್ಖಾನೆ ಜಾಗದಲ್ಲಿ ದಶಕಗಳಿಂದ ಕೃಷಿ ಮಾಡಿಕೊಂಡಿರುವ ರೈತರಿಗೆ ಭೂ ಸುಧಾರಣೆ ಕಾಯ್ದೆಯಡಿ ತಿದ್ದುಪಡಿ ತಂದು ಕೃಷಿ ಭೂಮಿ ಕೊಡಿಸಬೇಕು ಎಂದು ಜೆಡಿಎಸ್ ಕಾರ್ಯಕಾರಣಿ ಸದಸ್ಯ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದರು.

ಶಿವಮೊಗ್ಗದಲ್ಲಿ ಒಂದು ಕಾಲದಲ್ಲಿ ಆರ್ಥಿಕ ಚಟುವಟಿಕೆಗೆ ಬೆನ್ನೆಲುಬಾಗಿದ್ದ ಸಕ್ಕರೆ ಕಾರ್ಖಾನೆ ಜಾಗದಲ್ಲಿ ಕೃಷಿ ಮಾಡುತ್ತಿರುವ ರೈತರ ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಸರ್ಕಾರ ಅಲ್ಲಿನ ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಸಕ್ಕರೆ ಕಾರ್ಖಾನೆ ಜಾಗದಲ್ಲಿದ್ದ ಜಮೀನುಗಳಲ್ಲಿ ಬಹಳ ವರ್ಷಗಳಿಂದ ಕೃಷಿಕರು ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕೆಲವರು ಹೈಕೋರ್ಟ್ ಆದೇಶವಿದೆ ಎಂದು ಬೆದರಿಸಿ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಜಮೀನು ಉಳಿಸಿಕೊಡುತ್ತೇವೆಂದು ರೈತರ ಬಳಿ 5ರಿಂದ 7 ಲಕ್ಷ ರೂ.ವರೆಗೂ ಪಡೆಯುತ್ತಿದ್ದಾರೆ. ಮುಗ್ಧ ರೈತರು ಜಮೀನು ಉಳಿಸಿಕೊಳ್ಳಲು ಸಾಲ ಮಾಡಿ ಹಣ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಮಧ್ಯ ಪ್ರವೇಶಿಸಿ ಅಲ್ಲಿನ ಕೃಷಿಕರಿಗೆ ಭೂಮಿ ಕೊಡಿಸಬೇಕು. ನೆಮ್ಮದಿ ಜೀವನ ನಡೆಸಲು ಅನುವು ಮಾಡಿಕೊಡಬೇಕಿದೆ ಎಂದು ಮನವಿ ಮಾಡಿದರು. ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ನಗರ ಅಧ್ಯಕ್ಷ ದೀಪಕ್ ಸಿಂಗ್, ಪಾಲಿಕೆ ಮಾಜಿ ಸದಸ್ಯ ಮಂಜುನಾಥ, ಪ್ರಮುಖರಾದ ವಾಜಿದ್, ವೆಂಕಟೇಶ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net