

ವಿಜಯಪುರ: ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಯಲ್ಲಿ ಕೊಟ್ಪಾ ಸೆಕ್ಷನ್-4ರ ನಾಮಫಲಕದ ಗೋಡೆ ಬರಹ ಬರೆಸುವುದು ಹಾಗೂ ನಾಮಫಲಕಗಳನ್ನು ಶಾಲಾ-ಕಾಲೇಜಿನ ಪ್ರವೇಶ ದ್ವಾರದಲ್ಲಿ ಅಳವಡಿಸುವುದು ಸೇರಿದಂತೆ ಜಿಲ್ಲೆಯಾದ್ಯಂತ ಕೊಟ್ಪಾ ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೊಟ್ಪಾ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಶೈಕ್ಷಣಿಕ ಸಂಸ್ಥೆಗಳಲ್ಲಿ ‘ಕೊಟ್ಪಾ’ ನಾಮಫಲಕ ಗೋಡೆ ಬರಹ ಬರೆಯಿಸಬೇಕು. ಶಾಲಾ ಕಾಲೇಜಿನ ತಡೆಗೋಡೆಯಿಂದ 100 ಮೀಟರ್ ಅಂತರದಲ್ಲಿ ಯಾವುದೇ ತಂಬಾಕು ಪದಾರ್ಥಗಳ ಮಾರಾಟವಾಗದಂತೆ ನೋಡಿಕೊಳ್ಳಬೇಕು. ಶಾಲಾ-ಕಾಲೇಜಿನ ತಂಬಾಕು ನಿಯಂತ್ರಣ ಸಮಿತಿ ರಚಿಸಿ ನಿಯಮ ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ಶಾಲಾ ಕಾಲೇಜು ಆವರಣದಲ್ಲಿ ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಬಳಕೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ತಂಬಾಕು ಉತ್ಪನ್ನಗಳ ಉಪಯೋಗದಿಂದಾಗುವ ದುಷ್ಟರಿಣಾಮ ಹಾಗೂ ಕೊಟ್ಪಾ -2003ರ ಕುರಿತು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು. ಕೊಟ್ಪಾ ಅಂಶಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪ್ರತಿಯೊಂದು ಶಾಲಾ-ಕಾಲೇಜ್ ದೃಢೀಕರಣವನ್ನು ಹದಿನೈದು ದಿನದೊಳಗೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ತಾಲೂಕು ಮಟ್ಟದ ತನಿಖಾದಳ ಕ್ರೀಯಾಶೀಲತೆಯಿಂದ ಕಾಲ-ಕಾಲಕ್ಕೆ ದಾಳಿ ನಡೆಸಬೇಕು. ವಾರಕ್ಕೊಮ್ಮೆ ಅಂತರ ಇಲಾಖಾ ತಂಡ ರಚಿಸಿಕೊಂಡು ದಾಳಿ ನಡೆಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ತಂಬಾಕು ದುಷ್ಪರಿಣಾಮ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಬೇಕು ಎಂದರು.
ಜಿಲ್ಲೆಯ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿಯಂತೆ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳನ್ನಾಗಿ ದೃಢೀಕರಣ ದಾಖಲೆ ಸಲ್ಲಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಎಲ್ಲ ಬಸ್ ನಿಲ್ದಾಣ ಆವರಣದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವವರ ವಿರುದ್ದ ಕ್ರಮ ಜರುಗಿಸಿ ದಂಡ ವಿಧಿಸಿದ ವಿವರ ಸಲ್ಲಿಸಬೇಕು ಎಂದು ಹೇಳಿದರು.
ಜಿಪಂ ಸಿಇಒ ರಾಹುಲ್ ಶಿಂಧೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಬಸವರಾಜ ಹುಬ್ಬಳ್ಳಿ, ಜಿಲ್ಲಾ ಸವೇಕ್ಷಣಾಧಿಕಾರಿ ಡಾ.ಕವಿತಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಎಸ್.ಎಲ್. ಲಕ್ಕಣ್ಣವರ, ಡಾ.ಸಂಪತ್ ಗುಣಾರಿ ಮತ್ತಿತರರಿದ್ದರು.