

ಶಿವಮೊಗ್ಗ: ರೈತ, ದಲಿತ, ಹಿಂದುಳಿದ ವರ್ಗದ ವಿರೋಧಿ ಎನ್‌ಡಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ಬಿಜೆಪಿಯೇತರ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಹೈಕೋರ್ಟ್ ವಕೀಲ, ಮಾಜಿ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮಕುಮಾರ್ ಮನವಿ ಮಾಡಿದರು.
ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿವಿಗೆ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ರೈತರ ಆತ್ಮಹತ್ಯೆ ನಿಲ್ಲಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಸೋಲಿಸುವುದು ಅನಿವಾರ್ಯ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿ. ಇಲ್ಲಿನ ಸಾಮಾಜಿಕ ನ್ಯಾಯ ಹಲವು ದೇಶಗಳಿಗೆ ಪ್ರೇರಣೆ ಆಗಿದೆ. ಇಂತಹ ಸಾಮಾಜಿಕ ನ್ಯಾಯಕ್ಕೆ ಕುತ್ತು ತರುವ ಕೆಲಸ ಪ್ರಸ್ತುತ ಆಗುತ್ತಿದೆ. ರೈತರು, ದಲಿತರು, ಹಿಂದುಳಿದ ವರ್ಗದವರ ಬದುಕು ಮೂರಾಬಟ್ಟೆಯಾಗಿದೆ. ರೈತರಿಗೆ ಆಗಿರುವ ದ್ರೋಹ, ಹಿಂದುಳಿವರಿಗೆ ವಂಚನೆ, ಪರಿಶಿಷ್ಟರಿಗೆ ಮಾಡಿರುವ ಮೋಸದ ಬಗ್ಗೆ ಧ್ವನಿ ಎತ್ತಬೇಕು ಎಂದರು.
ರೈತ ಮುಖಂಡ ಶಿವಾನಂದ್, ವಕೀಲರಾದ ಈಶ್ವರ್, ಉಮೇಶ್, ಪ್ರೊ. ಕಲ್ಲನ ಸುದ್ದಿಗೋಷ್ಠಿಯಲ್ಲಿದ್ದರು.
ಕಪ್ಪು ಹಣದಿಂದಲೇ ಗೆಲುವು
2018ರಲ್ಲಿ ಚುನಾವಣಾ ಬಾಂಡ್ ಹೆಸರಲ್ಲಿ 6,060 ಕೋಟಿ ರೂ. ಪಡೆದಿರುವುದು ಬಹುದೊಡ್ಡ ಹಗರಣ. 6 ವರ್ಷಗಳ ಬಳಿಕ ಕಪ್ಪು ಹಣ ಬೆಳಕಿಗೆ ಬಂದಿದೆ. 2018ರ ನಂತರ ನಡೆದ ಎಲ್ಲ ಚುನಾವಣೆಗಳನ್ನೂ ಬಿಜೆಪಿ ಆ ಕಪ್ಪು ಹಣದಿಂದಲೇ ನಡೆಸಿದೆ ಎಂದು ರವಿವರ್ಮಕುಮಾರ್ ಆರೋಪಿಸಿದರು. ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ರಹಿತ ಆಡಳಿತ ನಡೆಸುವುದಾಗಿ ಹೇಳುತ್ತಿದ್ದಾರೆ. ಆದರೆ ಕಪ್ಪು ಹಣದ ದಂಧೆಕೋರರೇ ಬಿಜೆಪಿಯ ದೊಡ್ಡ ಆಸ್ತಿ. ಕಪ್ಪು ಹಣ ಇದ್ದವರನ್ನು ಹುಡುಕಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಅವರ ಮಾತು ಕೇಳದ ಪ್ರತಿಪಕ್ಷದವರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದರು.