

ಕಂಪ್ಲಿ: ಪಟ್ಟಣದ ನಂಜನಗೂಡು ರಾಘವೇಂದ್ರ ಸ್ವಾಮಿ ಶಾಖಾ ಮಠದಲ್ಲಿ ಗುರುಸಾರ್ವಭೌಮ ರಾಘವೇಂದ್ರ ತೀರ್ಥರ 354ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ಶ್ರದ್ಧೆ, ಭಕ್ತಿಯಿಂದ ಭಾನುವಾರ ಜರುಗಿತು.
ಶ್ರೀಮಠದಲ್ಲಿ ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ ಪಾರಾಯಣ, ಫಲ-ಪಂಚಾಮೃತ, ಕನಕಾಭಿಷೇಕ, ಹಸ್ತೋದಕ, ಮಹಾಮಂಗಳಾರತಿ, ಅನ್ನಸಂತರ್ಪಣೆ, ಸಂಜೆ ಮಠದ ಪ್ರಾಂಗಣದಲ್ಲಿ ರಥೋತ್ಸವ, ಸ್ವಸ್ತಿವಾಚನ, ತೊಟ್ಟಿಲು ಸೇವೆ ನಡೆದವು.
ಆ.9ರಂದು ಬೆಳಗ್ಗೆ ಗೋ ಪೂಜೆ ಬಳಿಕ ಪ್ರಮುಖ ಕೆ.ಅನಂತ ಪದ್ಮನಾಭರಾವ್ ಅವರಿಂದ ಧ್ವಜಾರೋಹಣ, ಧಾನ್ಯ, ಲಕ್ಷ್ಮೀ ಪೂಜಾ, ಸ್ವಸ್ತಿ ವಾಚನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಆರಾಧನಾ ಮಹೋತ್ಸವದ ನಿಮಿತ್ತ ಶ್ರೀಮಠದಲ್ಲಿ ರಾಯರ ಬೃಂದಾವನವನ್ನು ನಾನಾ ಫಲ-ಪುಷ್ಪಗಳಿಂದ ವಿಶೇಷವಾಗಿ ಶೃಂಗರಿಸಲಾಗಿತ್ತು.
ನೀತಾ ಜಗದೀಶ ರಾಯ್ಕರ್ ಅವರಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಸತ್ಯನಾರಾಯಣ ಭಜನಾ ಮಹಿಳಾ ಮಂಡಳಿಯವರಿಂದ ಭಕ್ತಿ ಗೀತೆಗಳ ಗಾಯನ ನಡೆಯಿತು. ಮಠದ ವಿಚಾರಣಾಕರ್ತ ಟಿ.ಕೋಟ್ರೇಶ, ವ್ಯವಸ್ಥಾಪಕ ಪುರುಷೋತ್ತಮ ಆಚಾರ್, ಗುರುರಾಜ ಸೇವಾ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.