

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಪಿ.ಸಿ. ಜಾಬಿನ್ ಕಾಲೇಜ್‌ನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪುನಃಶ್ಚೇತನ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಸೋಮವಾರ ಏರ್ಪಡಿಸಲಾಗಿತ್ತು.
ಏಕಸ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಡಾ. ರವಿ ಗುತ್ತಲ ಉದ್ಘಾಟಿಸಿ ಮಾತನಾಡಿ, ಸಮಯ ವ್ಯರ್ಥ ಮಾಡದೆ ಸತತ ಅಭ್ಯಾಸದಿಂದ ನಿಮ್ಮ ಎರಡು ವರ್ಷದ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು. ಇದರಿಂದ ಮುಂದಿನ ಗುರಿ ತಲಪು ಸಾಧ್ಯವಾಗುತ್ತದೆ ಎಂದರು.
ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಹಾಗೂ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಗುಣಾತ್ಮಕ ಶಿಕ್ಷಣ ಕೊಡುವಲ್ಲಿ ಕೆಎಲ್‌ಇ ಸಂಸ್ಥೆಯ ಪಾತ್ರ ತುಂಬಾ ಮುಖ್ಯವಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಜಾತಿ, ಧರ್ಮ, ಬಡತನ ಅಡ್ಡಿಯಾಗುವುದಿಲ್ಲ. ಸತತ ಪರಿಶ್ರಮವಿದ್ದರೆ ಸಾಧನೆ ತಮ್ಮದಾಗುವುದು ಖಂಡಿತ ಎಂದರು.
ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಜಾಬಿನ್ ಕಾಲೇಜ್ ಮಹಾದಾನಿಗಳ ಕುಟುಂಬದ ಸದಸ್ಯಚನ್ನಪ್ಪಣ್ಣ ಜಾಬಿನ್ ಮಾತನಾಡಿದರು.
ಪದವಿ ಪ್ರಾಚಾರ್ಯೆ ಡಾ. ಸಂಧ್ಯಾ ಆರ್. ಕುಲಕರ್ಣಿ, ಪೇಸ್ ಅಕಾಡೆಮಿ ಸಲಹೆಗಾರ ಆದರ್ಶ ಪಾಟೀಲ ವಿದ್ಯಾರ್ಥಿಗಳಿಗೆ ಉಪಯುಕ್ತ ಸಲಹೆ ನೀಡಿದರು. ತೂರ್ಯ ಐಐಟಿ, ನೀಟ್, ಜೆಇಇ ಅಕಾಡೆಮಿ ಸಂಸ್ಥಾಪಕ ಬಿ.ಬಿ. ಪಾಟೀಲ ಇತರರು ಉಪಸ್ಥಿತರಿದ್ದರು.
ಪದವಿ ಪೂರ್ವ ಪ್ರಾಚಾರ್ಯ ವಿ.ಆರ್. ವಾಘಮೋಡಿ ಸ್ವಾಗತಿಸಿದರು. ಕ್ರೀಡಾ ವೇದಿಕೆ ಉಪಾಧ್ಯಕ್ಷೆ ಅಮ್ರಿತಾ ಅಣ್ಣಿಗೇರಿ ಅತಿಥಿಗಳನ್ನು ಪರಿಚಯಿಸಿದರು. ವಿಜೇತಾ ಕಾಂಬಳೆ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಸೃಷ್ಟಿ ಸಾಲಿಮಠ ಪ್ರಾರ್ಥಿಸಿದರು. ಕಾಲೇಜ್ ವೇದಿಕೆ ಉಪಾಧ್ಯಕ್ಷ ಗಿರೀಶ ಇಟಗಿ ವಂದಿಸಿದರು. ಕನ್ನಡ ಉಪನ್ಯಾಸಕಿ ಗಿರಿಜಾ ಬೆಳಗಾವಿ ನಿರೂಪಿಸಿದರು.