

ಬೆಳಗಾವಿ: ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿ ಕೊಂಡು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಹೇಳಿದರು.
ತಾಲೂಕಿನ ಕಡೋಲಿ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಜಿಲ್ಲಾ ಗಣಿ ಭೂ ವಿಜ್ಞಾನ ಇಲಾಖೆ ಮತ್ತು ವಿಧಾನ ಪರಿಷತ್ ಸದಸ್ಯರ ಅನುದಾನದಡಿ 12 ಲಕ್ಷ ರೂ. ಮೊತ್ತದಲ್ಲಿ ಮಂಜೂರಾದ ಪ್ರಾರ್ಥನಾ ಮಂದಿರ ಮತ್ತು ಸಭಾಭವನ ನಿರ್ಮಾಣಕ್ಕೆ ಮಂಗಳವಾರ ಭೂಮಿಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಪ್ರಾರ್ಥನಾ ಮಂದಿರ ಮತ್ತು ಸಭಾಭವನ ಕಟ್ಟಡವನ್ನು ವ್ಯವಸ್ಥಿತವಾಗಿ ನಿರ್ಮಿಸಬೇಕು. ಜತೆಗೆ ಗುಣಮಟ್ಟದ ಕಲಿಕೆಗೆ ಆದ್ಯತೆ ನೀಡಬೇಕು ಎಂದರು. ಗ್ರಾಮದ ಮುಖಂಡ ಅಪ್ಪಸಾಹೇಬ ದೇಸಾಯಿ ಮಾತನಾಡಿ, ಶಾಲೆಯ ಬಹುದಿನಗಳ ಬೇಡಿಕೆಯಾಗಿದ್ದ ಪ್ರಾರ್ಥನಾ ಮಂದಿರ, ಸಭಾಭವನ ನಿರ್ಮಾಣಕ್ಕೆ ಸಾಬಣ್ಣ ತಳವಾರ ಅವರು ಅನುದಾನ ಒದಗಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ಬೆಳಗಾವಿ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ದಾಸಪ್ಪನವರ, ಗಜಾನನ ಕಾಗಣಿಕರ, ಶಿವಾ ದೇಸಾಯಿ, ಲಕ್ಷ್ಮೀ ಪಾಟೀಲ, ಕೆ.ಎಫ್. ಭಾವಿಹಾಳ, ಟಿ.ಜಿ. ಕುಲಕರ್ಣಿ, ಕಮಲಾ ತೋರಣಗಟ್ಟಿ, ಎಸ್.ಎಸ್. ಸತ್ಯನಾಯಿಕ, ಮುಖ್ಯ ಶಿಕ್ಷಕರಾದ ಎಸ್.ವೈ. ಖಾನಪೇಠ, ಮಹಾದೇವಿ ಹೊಟ್ಟಿನವರ, ರಾಜು ಸುತಾರ ಇತರರು ಇದ್ದರು.