

ಲಕ್ಷ್ಮೇಶ್ವರ; ತುಂಗಭದ್ರಾ ನದಿ ಪಾತ್ರದಲ್ಲಿ ಅನಧಿಕೃತವಾಗಿ ನೀರೆತ್ತುವ ರೈತರ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆಗೆ ಕೊನೆಗೂ ಅಧಿಕಾರಿಗಳು ಮುಂದಾಗಿದ್ದಾರೆ. ಗುರುವಾರ 20ಕ್ಕೂ ಹೆಚ್ಚು ಪಂಪ್‌ಸೆಟ್ ತೆರವು ಮಾಡಿ ನೀರಿನ ಅಕ್ರಮ ಬಳಕೆಗೆ ಲಗಾಮು ಹಾಕಲಾಯಿತು.
ಪಟ್ಟಣದಲ್ಲಿ ಬುಧವಾರ ಜಿಲ್ಲಾಧಿಕಾರಿ ನೇತೃತ್ವದ ಏರ್ಪಾಟಾಗಿದ್ದ ಜನತಾ ದರ್ಶನ ಕಾರ್ಯಕ್ರಮದ ವೇಳೆ ಈ ವಿಷಯದ ಬಗ್ಗೆ ಗಮನ ಸೆಳೆಯಲಾಗಿತ್ತು. ‘ಪಟ್ಟಣಕ್ಕೆ ಒಂದು ತಿಂಗಳಿಂದ ನದಿ ನೀರು ಸರಬರಾಜು ನಿಂತಿದೆ. ನದಿ ನೀರು ಸಂಗ್ರಹವಾಗುವ ಜಾಕ್‌ವೆಲ್‌ನಿಂದಲೇ ರೈತರು ಹಗಲೂ-ರಾತ್ರಿ ಪಂಪ್‌ಸೆಟ್‌ಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ನೀರೆತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನೀರು ಸಂಗ್ರಹವಾಗುವ ವ್ಯವಸ್ಥೆಯೂ ಇಲ್ಲ. ಸಾರ್ವಜನಿಕರು ನೀರಿಗಾಗಿ ಪರಿತಪಿಸುವಂತಾಗಿದೆ’ ಎಂದು ದೂರಲಾಗಿತ್ತು.
ಪರಿಸ್ಥಿತಿಯ ಗಂಭೀರತೆ ಅರಿತ ಜಿಲ್ಲಾಧಿಕಾರಿ ಕೂಡಲೇ ತಹಸೀಲ್ದಾರ್, ಪುರಸಭೆ, ತಾಪಂ, ಹೆಸ್ಕಾಂ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಲ್ಲಿರುವ ರೈತರ ಪಂಪ್‌ಸೆಟ್ ತೆರವುಗೊಳಿಸುವಂತೆ ಮತ್ತು ನೀರು ಸಂಗ್ರಹವಾಗುವ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದರು. ಗುರುವಾರ ಬೆಳಗ್ಗೆಯೇ ನದಿಗೆ ತೆರಳಿದಾಗ ಜಾಕ್‌ವೆಲ್ ಮತ್ತು ಅದರ ಅಕ್ಕಪಕ್ಕವೇ ನೂರಾರು ಪಂಪ್‌ಸೆಟ್‌ಗಳನ್ನು ನೋಡಿ ವಾಪಸ್ ಬಂದು ಪುರಸಭೆ ನೌಕರರು, ಸಿಬ್ಬಂದಿ, ಪೌರಕಾರ್ಮಿಕರೊಂದಿಗೆ ತೆರಳಿ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿದ್ದಾರೆ. ಆಕ್ಷೇಪವೆತ್ತಿದ ರೈತರಿಗೆ ‘ಜನರು ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಸದ್ಯಕ್ಕೆ ನೀರಾವರಿಗೆ ನೀರು ಬಳಸುವುದು ಬೇಡ. ಜಿಲ್ಲಾಧಿಕಾರಿ ಆದೇಶವಿದೆ’ ಎಂದು ತಿಳಿಹೇಳಿದರು. ಬಳಿಕ ಜಾಕ್‌ವೆಲ್‌ನಲ್ಲಿ ಸಂಗ್ರಹವಾಗಿದ್ದ ಕೆಸರು, ತ್ಯಾಜ್ಯವನ್ನು ಸ್ವಚ್ಛಗೊಳಿಸಿದರು.
ತುಂಗಭದ್ರಾ ನದಿ ಪಾತ್ರದಲ್ಲಿ ಅಳವಡಿಸಿದ್ದ 15ರಿಂದ 20 ರೈತರ ಪಂಪ್‌ಸೆಟ್‌ಗಳನ್ನು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ರೈತರಿಗೆ ತಿಳಿವಳಿಕೆ ಹೇಳುವ ಮೂಲಕ ತೆರವುಗೊಳಿಸಿದ್ದೇವೆ. ಪಂಪ್‌ಸೆಟ್ ಅಳವಡಿಸದಂತೆ ನಿಗಾವಹಿಸಲು ಗುತ್ತಲ ಪೊಲೀಸ ಸಹಕಾರ ಕೋರಲಾಗಿದೆ. ಭದ್ರಾ ಜಲಾಶಯದಿಂದ ಬಿಟ್ಟಿರುವ ನೀರು 2 ದಿನಗಳಲ್ಲಿ ನಮ್ಮ ಭಾಗಕ್ಕೆ ತಲುಪಲಿದೆ. ನದಿಯಲ್ಲಿ ಮರಳಿನ ಚೀಲ ಹಾಕಿ ನೀರಿನ ಹರಿವು ಬದಲಾಗದಂತೆ ನೋಡಿಕೊಳ್ಳಲಾಗುವುದು. ನದಿಯಲ್ಲಿಯೇ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಒಂದು ವಾರದಲ್ಲಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು.ಮಹೇಶ ಹಡಪದ, ಪುರಸಭೆ ಮುಖ್ಯಾಧಿಕಾರಿ