

* ಜಾಣ ಕುರುಡು ಪ್ರದರ್ಶಿಸುತ್ತಿರುವ ಸ್ಥಳೀಯ ಆಡಳಿತ
* ದಿನೇದಿನೆ ಹೆಚ್ಚುತ್ತಿವೆ ನಾಯಿ ದಾಳಿ ಪ್ರಕರಣ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ತಾಲೂಕಿನೆಲ್ಲೆಡೆ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಶ್ವಾನಗಳ ಉಪಟಳದಿಂದ ಜನ ಹೈರಾಣಾಗಿದ್ದಾರೆ.
ಹೌದು... ಚನ್ನಪಟ್ಟಣ ನಗರಸಭೆ ವ್ಯಾಪ್ತಿ ಸೇರಿ ತಾಲೂಕಿನಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದೆ. ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಹಾಗೂ ಪಾದಚಾರಿಗಳ ಮೇಲೆ ಬೀದಿನಾಯಿಗಳ ದಾಳಿ ಸಾಮಾನ್ಯ ಎನಿಸಿದೆ. ಇದು ಹಲವು ವರ್ಷಗಳಿಂದಲೂ ಇರುವ ಸಮಸ್ಯೆಯಾದರೂ, ಈ ಸಮಸ್ಯೆಗೆ ಮುಕ್ತಿ ಇಲ್ಲದಂತಾಗಿದೆ.
ನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ನೀಡಿ, ಸುರಕ್ಷಿತವಾಗಿ ಅದೇ ಸ್ಥಳದಲ್ಲಿ ಬಿಡಲು ಹಲವು ಬಾರಿ ಟೆಂಡರ್ ಕರೆದರೂ ಈವರೆಗೆ ಯಾರೂ ಭಾಗವಹಿಸದಿದ್ದುದು ಸಮಸ್ಯೆಯಾಗಿತ್ತು.
ನಗರ ಪ್ರದೇಶದಲ್ಲೇ 3 ಸಾವಿರಕ್ಕೂ ಅಧಿಕ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ನೀಡಿ, ಸುರಕ್ಷಿತವಾಗಿ ಅದೇ ಸ್ಥಳದಲ್ಲಿ ಬಿಡಲು ವಾಹನ ಸೌಲಭ್ಯ, ಸ್ಥಳಾವಕಾಶ ಮತ್ತಿತರ ವೆಚ್ಚಗಳು ಸೇರಿ ಲಕ್ಷಾಂತರ ರೂ. ಬೇಕಾಗಿದೆ. ಈ ವೆಚ್ಚವನ್ನು ಸ್ಥಳೀಯ ಸಂಸ್ಥೆಗಳ ನಿಧಿಯಿಂದಲೇ ಬಳಸಬೇಕಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಉಪಟಳ ಅತಿಯಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಟೆಂಡರ್ ಪ್ರಕ್ರಿಯೆ ನಡೆಸಿದ್ದು, ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ಟೆಂಡರ್ ದೊರಕಿದೆ. ನಗರಸಭೆಯಿಂದ ಕಾರ್ಯಾದೇಶ ಪ್ರತಿ ನೀಡಲು ಬಾಕಿಯಿದ್ದು, ಕೆಲವೇ ದಿನಗಳಲ್ಲಿ ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಆದರೆ, ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಳೀಯ ಗ್ರಾಪಂಗಳು ಇದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಜಾಣ ಕುರುಡು ಪ್ರದರ್ಶಿಸುತ್ತಿರುವ ಹಿನ್ನೆಲೆಯಲ್ಲಿ ನಾಯಿಗಳ ಹಾವಳಿಗೆ ಮಿತಿ ಇಲ್ಲದಂತಾಗಿದೆ.
ಬೀದಿ ನಾಯಿಗಳು ಕೋಳಿ, ಕುರಿಗಳನ್ನು ಕಚ್ಚಿ ತಿನ್ನುತ್ತಿರುವ ಪ್ರಕರಣಗಳು ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ಎನಿಸಿದೆ. ಇತ್ತೀಚೆಗೆ ತಾಲೂಕಿನ ಮಂಗಾಡಹಳ್ಳಿ ಪ್ರೇಮಾ ಚನ್ನಬಸವಪ್ಪ ಅವರು ಸಾಕಿದ್ದ ಸುಮಾರು ಅರವತ್ತು ನಾಟಿ ಕೋಳಿಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಸಾಯಿಸಿದ್ದವು. ಇದರೊಂದಿಗೆ, ಈಗಾಗಲೇ ನಗರ ಪ್ರದೇಶದ ಹಲವು ಕಡೆ ಬೀದಿನಾಯಿಗಳು ಮಕ್ಕಳು ಸೇರಿ ಸಾರ್ವಜನಿಕರ ಮೇಲೆ ಮಾರಣಾಂತಿಕ ದಾಳಿ ನಡೆಸಿರುವ ಹಲವು ನಿದರ್ಶನಗಳಿವೆ. ಶನಿವಾರ ಮಧ್ಯಾಹ್ನ ನಗರದ ಮಂಜುನಾಥ ನಗರದ ಚಾನೆಲ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಲ್ಕು ಮಂದಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವುದು ತಾಜಾ ಉದಾಹರಣೆ.
ಯಾವುದೇ ರಸ್ತೆಗೆ ಹೋದರೂ ಅಲ್ಲಿ ಬೀದಿನಾಯಿಗಳು ಗುಂಪುಗುಂಪಾಗಿ ಇರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಚಿಕ್ಕ ಮಕ್ಕಳನ್ನು ಹೊರಗೆ ಬಿಡಲು ಭಯಪಡುವ ವಾತಾವರಣ ನಗರಪ್ರದೇಶದಲ್ಲಿದೆ. ಇದಕ್ಕೆ ಗ್ರಾಮಾಂತರ ಪ್ರದೇಶವೂ ಹೊರತಲ್ಲ.
ನಗರದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ಗುಂಪುಗುಂಪಾಗಿ ಬರುವ ನಾಯಿಗಳು ಮಕ್ಕಳು, ವೃದ್ಧರು ಎನ್ನದೆ ಸಿಕ್ಕಸಿಕ್ಕವರ ಮೇಲೆ ಎರಗಿ ಗಾಯಗೊಳಿಸುತ್ತಿವೆ. ರಸ್ತೆಯಲ್ಲಿ ಓಡಾಡುವುದಕ್ಕೆ ಭಯದ ವಾತಾವರಣ ನಿರ್ಮಾಣವಾಗಿದೆ. ಶನಿವಾರ ವಾರ್ಡ್‌ನಲ್ಲಿ ಹಲವರ ಮೇಲೆ ಬೀದಿನಾಯಿಗಳು ದಾಳಿ ನಡೆಸಿ ಗಾಯಗೊಳಿಸಿವೆ. ನಗರಸಭೆ ಕ್ರಮ ಕೈಗೊಳ್ಳಬೇಕು.ಸರ್ವಮಂಗಳಾ ಲೋಕೇಶ್, ನಗರಸಭೆ ಸದಸ್ಯೆ.ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಆದಷ್ಟೂ ಬೇಗ ಬೀದಿನಾಯಿಗಳ ನಿಯಂತ್ರಣ ಮಾಡಲಾಗುವುದು. ಇದರೊಂದಿಗೆ, ಬೀದಿನಾಯಿಗಳ ಹಾವಳಿ ತಡೆಗಟ್ಟುವುದಕ್ಕೆ ನಗರಸಭೆಯಿಂದ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ.ಮಹೇಂದ್ರ, ಪೌರಾಯುಕ್ತ ಚನ್ನಪಟ್ಟಣ ನಗರಸಭೆ.