

ಮೈಸೂರು; ಶೈಕ್ಷಣಿಕ ವಲಯ ಮತ್ತು ಕೈಗಾರಿಕೆ ನಡುವಿನ ಅಂತರವನ್ನು ತೊಡೆದು ಹಾಕುವ ಪ್ರಯತ್ನಗಳು ನಡೆಯಬೇಕಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್(ಎನ್‌ಐಪಿಎಂ) ಮತ್ತು ಮೈಸೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಯುವ ಜನರಲ್ಲಿ ನಾಯಕತ್ವ ರೂಪಿಸುವ ಕುರಿತು ಮಾನಸಗಂಗೋತ್ರಿ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
ಕೈಗಾರಿಕೆ ಮತ್ತು ಶೈಕ್ಷಣಿಕ ವಲಯದ ನಡುವೆ ಅಂತರವಿದೆ. ಇದು ನಿವಾರಣೆಯಾದರೆ ಪರಸ್ಪರ ಪೂರಕವಾಗಿ ಬೆಳವಣಿಗೆ ಸಾಧಿಸಲು ಸಾಧ್ಯವಿದೆ. ಇದರ ನೇರ ಪರಿಣಾಮ ವಿದ್ಯಾರ್ಥಿಗಳು, ಸಮಾಜಕ್ಕೆ ಆಗಲಿದೆ ಎಂದರು.
21ನೇ ಶತಮಾನ ಜ್ಞಾನ ಯುಗ. ಇದಕ್ಕೆ ಭವಿಷ್ಯದ ನಾಯಕರನ್ನು ರೂಪಿಸಲು ಪಂಚ ಕೌಶಲಾಭಿವೃದ್ಧಿಯನ್ನು ಯುವಜನರು ಅಳವಡಿಸಿಕೊಳ್ಳಬೇಕಿದೆ. ಕಠಿಣ ಸಂದರ್ಭದಲ್ಲಿ ಸಮಸ್ಯೆಗೆ ಪರಿಹಾರಾತ್ಮಕ ಚಿಂತನೆ, ಸಂವಹನ ಪ್ರಾವೀಣ್ಯತೆ, ಹೊಂದುಕೊಳ್ಳುವಿಕೆ- ಸ್ಥಿತಿಸ್ಥಾಪಕತ್ವ, ತಾಂತ್ರಿಕ ಸಾಕ್ಷರತೆ, ನಾಯಕತ್ವ-ಭಾವನಾತ್ಮಕ ಬುದ್ಧಿವಂತಿಕೆ ಎಂಬ 5 ಸೂತ್ರಗಳನ್ನು ಯುವಜನರು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.
ಸಂದಿಗ್ಧ ಸಂದರ್ಭದಲ್ಲಿ ವಿಷಯಾಧಾರಿತ ಮತ್ತು ವಿಶ್ಲೇಷಣಾತ್ಮಕವಾಗಿ ಆಲೋಚಿಸಬೇಕು. ಕ್ಲಿಷ್ಟ ಸವಾಲುಗಳಿಗೆ ಆವಿಷ್ಕಾರದಾಯಕ ಪರಿಹಾರವನ್ನು ಕಂಡುಕೊಳ್ಳಬೇಕು. ಬದಲಾಗುತ್ತಿರುವ ಪರಿಸರಕ್ಕೆ ತಕ್ಕಂತೆ ಪರಿವರ್ತನೆಗೊಳ್ಳುವ ಗುಣವನ್ನೂ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತುಮಕೂರಿನ ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ವೀರೇಶಾನಂದ ಸರಸ್ವತಿ ಮಾತನಾಡಿ, ಯಾವುದೇ ಗುರಿ ಸಾಧನೆಗೆ ನೈತಿಕತೆ ಮತ್ತು ಮೌಲ್ಯವೇ ರಹದಾರಿ ಆಗಬೇಕು. ಇದನ್ನು ಬಿಟ್ಟು ಸಾಧಿಸುವ ಸಾಧನೆಗೆ ಸಾರ್ಥಕತೆ ಇರುವುದಿಲ್ಲ. ರಾತ್ರಿ ಕಳೆದು ಬೆಳಗ್ಗೆ ಆಗುವ ಹೊತ್ತಿಗೆ ಯಶಸ್ಸು ಸಿಗಲ್ಲ. ಅದಕ್ಕೆ ನಿರಂತರ ಪರಿಶ್ರಮ, ಬದ್ಧತೆ, ಶ್ರದ್ಧೆ, ಜ್ಞಾನ ಬೇಕು. ಈ ನಿಟ್ಟಿನಲ್ಲಿ ಯುವಜನರ ಪ್ರಯತ್ನಗಳು ಇರಬೇಕು ಎಂದರು.
ವಿಶ್ರಾಂತ ಕುಲಪತಿ ಡಾ.ವೈ.ಎಸ್.ಸಿದ್ದೇಗೌಡ, ಎನ್‌ಐಪಿಎಂ ರಾಷ್ಟ್ರೀಯ ಅಧ್ಯಕ್ಷ ಡಾ.ಎಂ.ಎಚ್.ರಾಜು, ಜಿಲ್ಲಾಧ್ಯಕ್ಷ ಸಿ.ವಿ.ಶ್ರೀನಿವಾಸನ್, ಮೈವಿವಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಚಂದ್ರಮೌಳಿ ಇನ್ನಿತರರು ಪಾಲ್ಗೊಂಡಿದ್ದರು.
ನಾಳೆಯ ನಾಯಕರನ್ನು ರೂಪಿಸುವುದು, ಮಾನವ ಸಂಪನ್ಮೂಲದಲ್ಲಿ ಡಿಜಿಟಲ್ ರೂಪಾಂತರ, 21ನೇ ಶತಮಾನದ ಯುವಜನರಿಗೆ ಕೌಶಲಗಳು, ಮೌಲ್ಯಗಳು ಮತ್ತು ನೈತಿಕತೆ ಮೊದಲಾದ ವಿಷಯ ಕುರಿತು ತಾಂತ್ರಿಕ ಅಧಿವೇಶನ ನಡೆಯಿತು. ಎಂಕಾಂ, ಎಂಬಿಎ, ಬಿಬಿಎ, ಕಾನೂನು ಮೊದಲಾದ ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದ ಸುಮಾರು 650 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.