4 ತಿಂಗಳಲ್ಲಿ ಬ್ರಿಡ್ಜ್-ಬ್ಯಾರೇಜ್ ಸಿದ್ಧ, ಹರೇಕಳ-ಅಡ್ಯಾರ್ ಸಂಪರ್ಕ ಸೇತು

Harekala bridge
Published on

ಅನ್ಸಾರ್ ಇನೋಳಿ ಉಳ್ಳಾಲ

ಹರೇಕಳ-ಅಡ್ಯಾರ್ ಡ್ಯಾಂ ಮತ್ತು ಸೇತುವೆ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದ್ದು, ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ವರ್ಷಾಂತ್ಯ ಲಘು ವಾಹನ ಸಂಚಾರಕ್ಕೂ ಮುಕ್ತವಾಗಲಿದೆ.

ಸಿದ್ದರಾಮಯ್ಯ ಸರ್ಕಾರ ಇದ್ದಾಗ 200 ಕೋಟಿ ರೂ. ಯೋಜನೆಯಲ್ಲಿ ಹರೇಕಳದಲ್ಲಿ ಸಿಹಿನೀರು ನಿಲ್ಲಿಸಿ ಉಳ್ಳಾಲ ಭಾಗಕ್ಕೆ ಸರಬರಾಜು ಮಾಡುವ ಡ್ಯಾಂ ಜತೆಗೆ ಹರೇಕಳ-ಅಡ್ಯಾರ್ ಸೇತುವೆಗೂ ಯೋಜನೆ ರೂಪಿಸಲಾಗಿತ್ತು.

‘ಟರ್ನ್ ಕೀ ಬೇಸಿಸ್’ ಮೈನರ್ ಇರಿಗೇಶನ್ ಸಂಸ್ಥೆ ಖರ್ಚು ವೆಚ್ಚದ ಯೋಜನೆ ರೂಪಿಸಿದ್ದು, ಜಿ.ಶಂಕರ್ ಸಂಸ್ಥೆ 192.5 ಕೋಟಿಗೆ ಸಂಪೂರ್ಣ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ. ಕಳೆದ ಮಾರ್ಚ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು, ಅದೇ ಸಂದರ್ಭ ಲಾಕ್‌ಡೌನಿಂದಾಗಿ ಅಡ್ಡಿಯಾಗಿತ್ತು. ಇದೀಗ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದ್ದು ಮೇ ಮಾಸಾಂತ್ಯ ಪೂರ್ಣಗೊಳ್ಳಲಿದೆ. ಸೇತುವೆ ಪೂರ್ಣಗೊಂಡು ಜನರು ಹರೇಕಳದಿಂದ ಅಡ್ಯಾರ್‌ಗೆ ನಡೆದಾಡಿಕೊಂಡು ಹೋಗಲು ಅವಕಾಶ ಸಿಗಲಿದೆ. ಮುಂದಿನ ವರ್ಷಾಂತ್ಯದಲ್ಲಿ ಏಳು ಮೀಟರ್ ಅಗಲದ ರಸ್ತೆಯೊಂದಿಗೆ ಸೇತುವೆ ಲಘುವಾಹನ ಸಂಚಾರ ಮುಕ್ತವಾಗಲಿದೆ.

ಪ್ರವಾಸೋದ್ಯಮಕ್ಕೂ ಅವಕಾಶ!: ಪಶ್ಚಿಮವಾಹಿನಿ ಯೋಜನೆಯಡಿ ನೀರಾವರಿ ಇಲಾಖೆಯಡಿ ಕಾಮಗಾರಿ ನಡೆಸಲಾಗಿದೆ. ಡ್ಯಾಂನಿಂದ 18.7 ಮಿಲಿಯನ್ ಕ್ಯೂಬಿಕ್ ಮೀಟರ್ ಸಿಹಿನೀರು ಸಿಗಲಿದ್ದು, ಉಳ್ಳಾಲ ಭಾಗದಲ್ಲಿ ಪ್ರತೀ ಮನೆ, ವ್ಯವಹಾರ ಕೇಂದ್ರಗಳಿಗೆ ಮೀಟರ್ ಅಳವಡಿಸಿ 24 ಗಂಟೆಯೂ ನೀರಿನ ವ್ಯವಸ್ಥೆ ಆಗಲಿದೆ.

ಅಲ್ಲದೆ ಮೀನುಗಾರಿಕೆ, ಬೋಟಿಂಗ್‌ಗೂ ಅವಕಾಶವಿದ್ದು, ಪ್ರವಾಸೋದ್ಯಮ ಕೇಂದ್ರವಾಗಿ ರೂಪುಗೊಳ್ಳಲಿದೆ. ನೂರಾರು ಎಕರೆ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಗೂ ಸಹಕಾರಿಯಾಗಲಿದ್ದು, ಎಲ್ಲವೂ ನಿರೀಕ್ಷೆಯಂತೆ ನಡೆದರೆ ಸಣ್ಣ ನೀರಾವರಿ ಇಲಾಖೆಯಿಂದ ರಾಜ್ಯದಲ್ಲೇ ಪ್ರಥಮ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತದ ಯೋಜನೆಯಾಗಿ ಇತಿಹಾಸ ನಿರ್ಮಾಣವಾಗಲಿದೆ.

ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯ ಇತಿಹಾಸದಲ್ಲೇ ದೊಡ್ಡ ಯೋಜನೆ ಪ್ರಥಮ ಬಾರಿ ಜಾರಿಗೆ ತರಲಾಗಿದೆ. ಘನವಾಹನ ಬಿಟ್ಟರೆ ಪರಿಸರ ಹಾಳಾಗುತ್ತದೆ. ಸೇತುವೆಗೂ ಹಾನಿ, ಗ್ರಾಮೀಣ ಮಟ್ಟದ ಸಂಸ್ಕೃತಿ ಸಂಪೂರ್ಣ ನಾಶವಾಗಿ ಬಿಡುತ್ತದೆ. ಯೋಜನೆಯಿಂದ ಉಳ್ಳಾಲದ ಜತೆ ಮಂಗಳೂರಿಗೂ 30 ವರ್ಷ ನೀರಿನ ಸಮಸ್ಯೆ ಇರದು. ಯು.ಟಿ.ಖಾದರ್, ಶಾಸಕ ಹರೇಕಳದಿಂದ ರಾಷ್ಟ್ರೀಯ ಹೆದ್ದಾರಿ ಯಾವುದೇ ಭಾಗಕ್ಕಾದರೂ ಸಂಪರ್ಕ ಸೇತುವೆ ಆಗಬೇಕೆನ್ನುವ ಆಕಾಂಕ್ಷೆ ಜನರಲ್ಲಿತ್ತು. ಆದರೆ ಜನರ ಅಭಿಲಾಷೆಯನ್ನು ಶಾಸಕರು ಇಷ್ಟು ಬೇಗ ಈಡೇರಿಸುತ್ತಾರೆಂದು ಯಾರೂ ಭಾವಿಸಿರಲಿಲ್ಲ, ಈ ಸೇತುವೆಯಿಂದ ಹರೇಕಳ ಮಾತ್ರವಲ್ಲದೆ ಆಸುಪಾಸಿನ ಎಲ್ಲ ಗ್ರಾಮದವರಿಗೂ ಪ್ರಯೋಜನ ಆಗಲಿದೆ. ಭರತ್ ರಾಜ್ ಶೆಟ್ಟಿ ಪಜೀರುಗುತ್ತು, ಮಾಜಿ ಅಧ್ಯಕ್ಷ ಪಜೀರ್ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net