ಸೇತುವೆ ಇಲ್ಲದೆ ಮಕ್ಕಳಿಗೆ ಸಂಕಷ್ಟ ಕಟ್ಟತ್ತಿಲ ಶಾಲೆಗೆ ಬೇಕು ಸರ್ವಋತು ಮಾರ್ಗ

bridge
Published on

ವಿಟ್ಲ: ಶಾಲೆಗಳಿಗೆ ಸರ್ವಋತುಗಳಲ್ಲೂ ಸಂಚರಿಸುವ ಮಾರ್ಗಗಳಿರುವ ಈ ಕಾಲದಲ್ಲೂ ಕೊಳ್ನಾಡು ಗ್ರಾಮದ ಕಟ್ಟತ್ತಿಲ ಹಿರಿಯ ಪ್ರಾಥಮಿಕ ಶಾಲೆಗೆ ಮಳೆಗಾಲದಲ್ಲಿ ನೇರವಾಗಿ ವಾಹನದಲ್ಲಿ ಹೋಗಲು ದಾರಿ ಇಲ್ಲ. ಸಮೀಪದಿಂದ ಹೋಗಲು ದಾರಿಯಿದ್ದರೂ ಸೇತುವೆ ಇಲ್ಲದೆ ಸುತ್ತಿ ಬಳಸಿ ತೆರಳಬೇಕಾದ ಸ್ಥಿತಿ ಇದೆ.

ಸಾಲೆತ್ತೂರು ಪೇಟೆ- ಬಾಕ್ರಬೈಲು ಸಂಪರ್ಕಿಸುವ ಮುಖ್ಯರಸ್ತೆಯಿಂದ ನಾಟೆಕಲ್ಲು ಎಂಬಲ್ಲಿ ಕಟ್ಟತ್ತಿಲ ಶ್ರೀ ಗೋಪಾಲಕೃಷ್ಣ ಮಠಕ್ಕೆ ಸಂಚರಿಸುವ ರಸ್ತೆ ಇದೆ. ಇದೇ ದಾರಿಯಲ್ಲಿ ಶಾಲೆಗೂ ಹೋಗಬೇಕು. ಕಟ್ಟತ್ತಿಲ ಶ್ರೀ ಗೋಪಾಲಕೃಷ್ಣ ಮಠದ ಸಮೀಪ ಪುಟ್ಟ ಹೊಳೆ ಇದೆ. ಬೇಸಿಗೆಯಲ್ಲಿ ನದಿಗೆ ಇಳಿದು ವಾಹನ ಸಂಚರಿಸಬಹುದು. ಮಳೆಗಾಲದಲ್ಲಿ ಇದು ಸಾಧ್ಯವಿಲ್ಲ. ನದಿಯ ಎರಡೂ ಪಾರ್ಶ್ವದಲ್ಲಿ ರಸ್ತೆ ಇದ್ದರೂ ವಾಹನ ಸಂಚಾರ ಅಸಾಧ್ಯ. ನದಿಯಲ್ಲಿ ನೀರಿರುವಾಗ ಸಮೀಪದ ಪುಟ್ಟ ಕಾಲುಸಂಕವೇ ಸಂಪರ್ಕ ಕೊಂಡಿ. ದ್ವಿಚಕ್ರ ವಾಹನಗಳು ಇದರಲ್ಲೇ ಓಡಾಡುತ್ತವೆ.

ಮಳೆಗಾಲದಲ್ಲಿ ಇಲ್ಲಿನ ಮೆದು ಎಂಬಲ್ಲಿಂದ ಕಟ್ಟತ್ತಿಲ ಎಸ್‌ಸಿ ಕಾಲನಿ ಮೂಲಕ 5 ಕಿ.ಮೀ. ಸುತ್ತು ಬಳಸಿ ಶಾಲೆಗೆ ವಾಹನಗಳು ಸಂಚರಿಸುತ್ತವೆ. ಈ ರಸ್ತೆ ಖಾಸಗಿ ಜಮೀನಿನ ಮೂಲಕ ಹಾದುಹೋಗುವುದರಿಂದ ಹಲವು ತಕರಾರುಗಳಿವೆ. ಶಾಲೆಯ ಜತೆಗೆ ಸುಮಾರು 50 ಮನೆಗಳಿಗೂ ರಸ್ತೆಯ ಅನಿವಾರ್ಯತೆ ಇದೆ. ಶಾಲೆಗೆ ಸಂಪರ್ಕ ಸೇತುವೆಗಾಗಿ ಹಿಂದೆ ಲೋಕೋಪಯೋಗಿ ಇಲಾಖೆ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಅದು ಜಾರಿಯಾಗದೆ ನನೆಗುದ್ದಿಗೆ ಬಿದ್ದಿದೆ.

ಸಂಪರ್ಕ ಸುಲಭ: ನಾಟೆಕಲ್ಲು ಕಟ್ಟತ್ತಿಲಮಠ ರಸ್ತೆಯಲ್ಲಿ ಈ ಸೇತುವೆ ನಿರ್ಮಾಣವಾಗಿ ರಸ್ತೆ ಅಭಿವೃದ್ಧಿಯಾದರೆ ಶಾಲೆಯ ಸಮಸ್ಯೆ ನಿವಾರಣೆಯಾಗುವ ಜತೆಗೆ ಇರಾ ಗ್ರಾಮವನ್ನು ಸುಲಭದಲ್ಲಿ ಸಂಪರ್ಕಿಸಬಹುದು.

ಕಟ್ಟತ್ತಿಲ ಮಠದಿಂದ ಶಾಲೆಗೆ ಸಂಪರ್ಕ ಕಲ್ಪಿಸುವಲ್ಲಿ 30 ವರ್ಷಗಳಿಂದ ಇದ್ದ ಜಾಗದ ತಕರಾರನ್ನು ದಾನಿಗಳ ಸಹಕಾರದಲ್ಲಿ ನಿವಾರಿಸಲಾಗಿದೆ. ಸೇತುವೆ ನಿರ್ಮಾಣಕ್ಕೆ ಪಂಚಾಯಿತಿಯಲ್ಲಿ ಸೂಕ್ತ ಅನುದಾನವಿಲ್ಲದ ಕಾರಣಕ್ಕೆ ಲೋಕೋಪಯೋಗಿ ಇಲಾಖೆ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

-ಸುಭಾಶ್ಚಂದ್ರ ಶೆಟ್ಟಿ ಕುಳಾಲು ಮಾಜಿ ಅಧ್ಯಕ್ಷರು, ಕೊಳ್ನಾಡು ಗ್ರಾಮ ಪಂಚಾಯಿತಿ

ಶಾಲೆಯಲ್ಲಿ ಒಟ್ಟು 53 ವಿದ್ಯಾರ್ಥಿಗಳಿದ್ದು, 45 ಮಕ್ಕಳು ಸೇತುವೆಯ ಫಲಾನುಭವಿಗಳಾಗಿದ್ದಾರೆ. ನದಿಯಲ್ಲಿ ನೀರಿನ ರಭಸಕ್ಕೆ ಭಯ ಬೀಳುವ ಒಂದನೇ ತರಗತಿ ವಿದ್ಯಾರ್ಥಿಗಳನ್ನು ಕಾಲುಸಂಕದಲ್ಲಿ ಎತ್ತಿಕೊಂಡು ಇನ್ನೊಂದು ಕಡೆ ದಾಟಿಸಬೇಕಾಗುತ್ತದೆ. ವಾಹನ ಸಂಚಾರ ಯೋಗ್ಯ ಸೇತುವೆ ನಿರ್ಮಾಣವಾದರೆ ಉತ್ತಮ.

- ಚಿತ್ರಕಲಾ ಸಹಶಿಕ್ಷಕಿ, ಹಿರಿಯ ಪ್ರಾಥಮಿಕ ಶಾಲೆ ಕಟ್ಟತ್ತಿಲಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net