ಬಿರುಸಿನಿಂದ ಸಾಗಿದೆ ಸೇತುವೆ ದುರಸ್ತಿ

03SPT3
ಚೋರನ ಹೊಳೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯಲ್ಲಿ ಶಿಥಿಲಗೊಂಡಿರುವ ಕಬ್ಬಿಣಕ್ಕೆ ವೆಲ್ಡಿಂಗ್ ಮಾಡುತ್ತಿರುವ ಕಾರ್ಮಿಕರು.
Published on

ಸೋಮವಾರಪೇಟೆ: ಐಗೂರು ಜಂಕ್ಷನ್‌ನಲ್ಲಿರುವ ಚೋರನ ಹೊಳೆಗೆ ಅಡ್ಡಲಾಗಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಕಬ್ಬಿಣ ಸೇತುವೆ ಕುಸಿಯುವ ಹಂತ ತಲುಪಿದ್ದು, ತಾತ್ಕಾಲಿಕವಾಗಿ ಸೇತುವೆ ದುರಸ್ತಿಪಡಿಸುವ ಕೆಲಸ ಬಿರುಸಿನಿಂದ ಸಾಗಿದೆ.

ಶಿಥಿಲವಾಗಿರುವ ಸೇತುವೆಗೆ ಅಳವಡಿಸಿರುವ ಕಬ್ಬಿಣದ ಸಲಾಕೆಗಳಿಗೆ ಲೋಕೋಪಯೋಗಿ ಇಲಾಖೆಯಿಂದ ಭಾನುವಾರ ಅಲ್ಲಲ್ಲಿ ವೆಲ್ಡ್ ಮಾಡಲಾಗುತ್ತಿತ್ತು. ಹೀಗಾಗಿ ಭಾರಿ ಸರಕು ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಲಘು ವಾಹನಗಳಿಗೆ ಮಾತ್ರ ಎಂದಿನಂತೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. 10 ಕೋಟಿ ರೂ. ವೆಚ್ಚದ ನೂತನ ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ ಎಂದು ಸೇತುವೆ ಕಾಮಗಾರಿ ಉಸ್ತುವಾರಿ ಇಂಜಿನಿಯರ್ ಎಂ.ಎಚ್. ವಿಜಯಕುಮಾರ್ ತಿಳಿಸಿದರು.

ನೂತನ ಸೇತುವೆ ಕಾಮಗಾರಿಗೆ ತಜ್ಞರ ತಂಡ ಬಂದು ಪರಿಶೀಲಿಸಲಿದೆ. ಅದರ ನೀಲಿನಕ್ಷೆಯನ್ನು ಒಂದೆರಡು ದಿನಗಳಲ್ಲಿ ನೀಡಲಿ ದ್ದಾರೆ. ಶೀಘ್ರ ನೂತನ ಸೇತುವೆ ನಿರ್ಮಾಣ ಮಾಡಿ ಜನರ ಬಳಕೆಗೆ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಎಇಇ ವೆಂಕಟೇಶ್ ನಾಯಕ್ ತಿಳಿಸಿದರು.
ತಾಲೂಕಿನ ಮಡಿಕೇರಿ-ಕೊಡ್ಲಿಪೇಟೆ ರಾಜ್ಯ ಹೆದ್ದಾರಿಯನ್ನು 1837ರಲ್ಲಿ ಬ್ರಿಟಿಷ್ ಅಧಿಕಾರಿ ಲಾರ್ಡ್ ಲೂಯಿಸ್ ಕಾಲದಲ್ಲಿ ನಿರ್ಮಿಸಲಾಗಿತ್ತು. ಇದ್ದಕ್ಕಿದ್ದ ಹಾಗೆ ಸೇತುವೆ ಮೇಲೆ ಗುಂಡಿ ಬಿದ್ದಿತ್ತು. ಅಲ್ಲದೆ ಸೇತುವೆಗೆ ಬಳಸಿರುವ ಕಬ್ಬಿಣ ತುಕ್ಕು ಹಿಡಿದು ಶಿಥಿಲಾವಸ್ಥೆ ತಲುಪಿತ್ತು. ಮಡಿಕೇರಿಯಿಂದ ಹಾಸನಕ್ಕೆ ಸಂಪರ್ಕಿಸುವ ಪ್ರಮುಖ ಹೆದ್ದಾರಿ ಆಗಿರುವುದರಿಂದ ಸರಕು ತುಂಬಿದ ವಾಹನಗಳು ಸಂಚರಿಸುತ್ತಿದ್ದವು. ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆ ಇಲ್ಲದ ಕಾರಣ ತಕ್ಷಣಕ್ಕೆ ಸೇತುವೆ ದುರಸ್ತಿಪಡಿಸಲು ಲೋಕೋಪಯೋಗಿ ಇಲಾಖೆ ಮುಂದಾಗಿದೆ. ಶಾಸಕ ಡಾ.ಮಂತರ್‌ಗೌಡ ಅವರು ಸೇತುವೆ ನಿರ್ಮಾಣಕ್ಕೆ ಅನುದಾನ ತರವುದಾಗಿ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net