ತೊಡಕಾದ ಪೆರ್ವತ್ತೋಡಿ ತೋಡು

todu
ಪೆರ್ವತ್ತೋಡಿ ತೋಡಿಗೆ ನಿರ್ಮಿಸಿಕೊಂಡ ಅಡಕೆ ಮರದ ಸೇತುವೆ ಮೂಲಕ ದಾಟುತ್ತಿರುವ ಮಕ್ಕಳು ಹಾಗೂ ಮಹಿಳೆಯರು.
Published on

ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಯಿಮಲೆ ಗ್ರಾಮದವರ ನಿತ್ಯದ ಜೀವನಕ್ಕೆ ಪೆರ್ವತ್ತೋಡಿಯ ತೋಡು ಇನ್ನಿಲ್ಲದಂತೆ ಕಾಡುತ್ತಿದೆ. ಇಲ್ಲಿರುವ ತೋಡಿಗೆ ಸೇತುವೆ ನಿರ್ಮಿಸುವ ಕನಸು ಇನ್ನೂ ಈಡೇರದ್ದರಿಂದ ಗ್ರಾಮಸ್ಥರಿಗೆ ಅಡಕೆ ಮರದ ಕಾಲುಸಂಕವೇ ಆಸರೆಯಾಗಿದೆ.

ಕಾಯಿಮಲೆಯಿಂದ ಕಿನ್ನಿಂಗಾರಿಗೆ ಕೇವಲ ಮೂರು ಕಿ.ಮೀ. ದೂರ. ಆದರೆ, ಪೆರ್ವತ್ತೋಡಿಯಲ್ಲಿ ಸೇತುವೆ ಇಲ್ಲದೆ ಜನ ಕಿನ್ನಿಂಗಾರಿಗೆ ಬರಲು 13 ಕಿ.ಮೀ. ಸುತ್ತು ಬಳಸಿ ಬರಬೇಕಾಗುತ್ತದೆ. ಹೀಗಾಗಿ ದೂರ ಕ್ರಮಿಸುವ ಸಮಸ್ಯೆಯಿಂದ ಪಾರಾಗಲು ಇಲ್ಲಿನ ಜನರು ಅಪಾಯಕರ ರೀತಿಯಲ್ಲಿ ಕಾಲುಸಂಕ ದಾಟಿ ನಿತ್ಯದ ವ್ಯವಹಾರ ಮಾಡುವಂತಾಗಿದೆ.

ಈಡೇರದ ಕನಸು

ಪೆರ್ವತ್ತೋಡಿ ತೋಡಿನ ಒಂದು ಭಾಗ ಬೆಳ್ಳೂರು ಗ್ರಾಮ ಪಂಚಾಯಿತಿಯ 11ನೇ ವಾರ್ಡ್ ಆಗಿರುವ ಕಾಯಿಮಲೆಯಾಗಿದ್ದು, ಇನ್ನೊಂದು ಭಾಗ 12ನೇ ವಾರ್ಡ್ ಆಗಿರುವ ಪೆರ್ವತ್ತೋಡಿಯ ವ್ಯಾಪ್ತಿಯಲ್ಲಿದೆ. ಈ ತೋಡಿಗೆ ಶಾಶ್ವತ ಸೇತುವೆ ಆಗಬೇಕೆಂಬ ಜನರ ಕನಸು ಇನ್ನೂ ನೆರವೇರಿಲ್ಲ. ಈ ಪ್ರದೇಶದಿಂದ ಪ್ರತಿದಿನ ನೂರಾರು ಮಕ್ಕಳು ಅಂಗನವಾಡಿ, ಶಾಲೆ-ಕಾಲೇಜಿಗೆ ತೆರಳುತ್ತಾರೆ. ಸರ್ಕಾರಿ ಕಚೇರಿ, ಪಡಿತರ ಅಂಗಡಿ, ಬ್ಯಾಂಕ್ ಸಹಿತ ಎಲ್ಲ ಅಗತ್ಯ ಕೆಲಸಗಳಿಗಾಗಿ ಇಲ್ಲಿನ ಜನ ಕಿನ್ನಿಂಗಾರಿಗೆ ಬರಲೇಬೇಕು. ಹೀಗಾಗಿ ಯಾವುದೇ ಸುರಕ್ಷತೆ ಇಲ್ಲದ ಅಡಕೆ ಮರದ ಸೇತುವೆ ಮೂಲಕೇ ಎಲ್ಲ ವಯೋಮಾನದವರೂ ಸಂಚರಿಸುವಂತಾಗಿದೆ.

ಮಕ್ಕಳ ಪಾಲಕರಿಗೂ ಭಯ

ಶಾಲೆ-ಕಾಲೇಜಿಗೆ ಹೋಗುವ ಮಕ್ಕಳು ತೋಡಿಗೆ ಹಾಕಿರುವ ಅಡಕೆ ಮರದ ಮೇಲೆ ಭಯದಿಂದಲೇ ಹೆಜ್ಜೆ ಹಾಕಬೇಕು. ಪಾಲಕರಿಗೂ ತಮ್ಮ ಮಕ್ಕಳು ತೋಡು ದಾಟಿ ಆಚೆ ಹೋಗುತ್ತಾರೆಂದರೆ ಭಯ. ಹೀಗಾಗಿ ಮಕ್ಕಳು ಶಾಲೆಗೆ ಹೋಗುವಾಗ ಹಾಗೂ ಮರಳಿ ಮನೆಗೆ ಬರುವಾಗ ಅವರನ್ನು ಸುರಕ್ಷಿತವಾಗಿ ಕರೆತರಲು ಎರಡು ಸಲ ಅಡಕೆ ಮರ ಅಳವಡಿಸಿದ ತೋಡಿಗೆ ಬರುತ್ತಾರೆ. ಇನ್ನೆಷ್ಟು ದಿನ ಇಂಥ ಪರಿಸ್ಥಿತಿ ಎದುರಿಸಬೇಕು ಎನ್ನುವುದು ಊರಿನವರ ಅಳಲು.

ಸಮಸ್ಯೆ ಪರಿಹರಿಸಲು ಕೋರಿಕೆ

ಪೆರ್ವತ್ತೋಡಿಯಲ್ಲಿ ಶಾಶ್ವತ ಕಾಂಕ್ರೀಟ್ ಸೇತುವೆ ನಿರ್ಮಿಸಲು ಸಂಸದರಿಗೆ ಹಾಗೂ ಶಾಸಕರಿಗೆ ಗ್ರಾಮಸ್ಥರು ಮನವಿ ನೀಡಿದ್ದಾರೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಯೋಜನೆ ಸಿದ್ಧವಾಗಿದ್ದರೂ, ಅನುದಾನ ಮಂಜೂರಾಗಿಲ್ಲ. ನೂತನ ಜಿಲ್ಲಾಧಿಕಾರಿಗೂ ಮನವಿ ಮಾಡಲಾಗಿದೆ. ಕಿನ್ನಿಂಗಾರಿಗೆ ಹೋಗಲು ಸಮೀಪದ ದಾರಿ ಇರುವಾಗಲೂ ಸಹ ಶಾಲಾ ಮಕ್ಕಳು, ವೃದ್ಧರು, ರೋಗಿಗಳು ಸುತ್ತು ಬಳಸಿದ ರಸ್ತೆಯಲ್ಲಿ ಸಾಗಬೇಕಿದೆ. ನಿತ್ಯದ ಈ ಸಮಸ್ಯೆ ಪರಿಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶಾಶ್ವತ ಸೇತುವೆ ನಿರ್ಮಾಣಕ್ಕೆ ಒಂದು ಕೋಟಿ ರೂ. ಬೇಕಾಗಬಹುದು. ಇಷ್ಟು ದೊಡ್ಡ ಮೊತ್ತ ಬಳಸಲು ಗ್ರಾಮ ಪಂಚಾಯಿತಿಗೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸಂಸದರು, ಶಾಸಕರಿಗೆ ನಿರಂತರ ಮನವಿ ನೀಡಿದ್ದರೂ ಅನುಮೋದನೆಗೊಂಡಿಲ್ಲ. ಇದೀಗ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ಗೆ ಮನವಿ ಮಾಡಲಾಗಿದ್ದು, ಅವರ ಸಮೀಕ್ಷೆಯ ನಿರೀಕ್ಷೆಯಲ್ಲಿದ್ದೇವೆ.-ಶ್ರೀಧರ ಎಂ.ಅಧ್ಯಕ್ಷ, ಬೆಳ್ಳೂರು ಗ್ರಾಪಂ https://www.vijayavani.net/school-and-hospital-roads-are-muddy

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net