ಮಂಜೂರಾದ ಸೇತುವೆ ಹೈಜಾಕ್!

aletti bridge
ಆಲೆಟ್ಟಿ ಗ್ರಾಮದ ಮಾಣಿಮರ್ಧುವಿನ ಕೊಡಂಬರೆ ಎಂಬಲ್ಲಿ ನಿರ್ಮಾಣವಾಗಬೇಕಾಗಿದ್ದ ಸಂಪರ್ಕ ಸೇತುವೆ ಬಿಲ್ಲರಮಜಲಿಗೆ ವರ್ಗಾವಣೆಗೊಂಡು ಅಲ್ಲಿ ನಿರ್ಮಾಣಗೊಂಡ ಸೇತುವೆ.
Published on

ಸುಳ್ಯ: ಪರಿಶಿಷ್ಟ ಪಂಗಡದವರೇ ಇರುವ ಆಲೆಟ್ಟಿ ಗ್ರಾಮದ ಮಾಣಿಮರ್ಧು ಸಮೀಪದ ಕೊಡಂಬರೆ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ 12 ಲಕ್ಷ ರೂ. ಬಿಡುಗಡೆ ಮಾಡಿತ್ತು. ಆದರೆ ಸೇತುವೆ ನಿರ್ಮಾಣವಾಗಿದ್ದು ಮಾತ್ರ ಇದೇ ವಾರ್ಡ್‌ನ ಕುಂಬಕ್ಕೋಡು ಬಿಲ್ಲರಮಜಲು ಎಂಬಲ್ಲಿ!

ಮಾಣಿಮರ್ಧುವಿನ ಕೊಡಂಬರಡ ಎಂಬಲ್ಲಿ ತೋಡೊಂದಿದ್ದು ಮಳೆ ಬಂದಾಗ ತೋಡು ದಾಟಲು ಸಾಧ್ಯವಾಗುವುದಿಲ್ಲ. ಅಲ್ಲಿಗೆ ಸೇತುವೆ ನಿರ್ಮಿಸಬೇಕೆಂಬ ಬೇಡಿಕೆಗೆ ಸ್ಪಂದನೆ ದೊರೆತು ಅನುದಾನ ಬಿಡುಗಡೆಗೊಂಡು ಟೆಂಡರ್ ಆಗಿತ್ತು. ಆದರೆ ಮಾಣಿಮರ್ಧುವಿನಲ್ಲಿ ಸೇತುವೆ ನಿರ್ಮಾಣವಾಗಿದೆ ಎಂದು ಬಿಲ್ ಪಾಸ್ ಮಾಡಿ ಬಿಲ್ಲರಮಜಲಿನಲ್ಲಿ ಸೇತುವೆ ನಿರ್ಮಿಸಲಾಗಿದೆ. ಇದರಿಂದ ಇದೀಗ ಮಾಣಿಮರ್ಧುವಿನ ಜನತೆ ಇದರಿಂದ ಬೇಸರಗೊಂಡಿದ್ದು ಇದಕ್ಕೆ ಕಾರಣಕರ್ತರು ಯಾರೆಂಬುದು ಗೊತ್ತಾಗಬೇಕು ಎಂದು ಒತ್ತಾಯಿಸಿದ್ದಾರೆ.

ಆಲೆಟ್ಟಿ ಗ್ರಾಪಂ ಸದಸ್ಯೆ ಗೀತಾ ಕೋಲ್ಚಾರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಕೊಣಂಪಾರೆಯಲ್ಲಿ ಸೇತುವೆ ನಿರ್ಮಿಸಲು ಅನುದಾನ ಬಿಡುಗಡೆಯಾಗಿದ್ದಾಗಲಿ, ಅದು ಬೇರೆಡೆಗೆ ಸ್ಥಳಾಂತರವಾಗಿದ್ದಾಗಲೀ ತನ್ನ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.

ಲೋಕಾಯುಕ್ತಕ್ಕೆ ದೂರು

ಒಂದೆಡೆ ನಡೆಯಬೇಕಾದ ಸೇತುವೆ ಕಾಮಗಾರಿ ಇನ್ನೊಂದೆಡೆಗೆ ವರ್ಗಾಯಿಸಿ ಅಲ್ಲಿ ಸೇತುವೆ ಕಾಮಗಾರಿ ಪೂರ್ತಿಗೊಳಿಸಿದ ಬಗ್ಗೆ ಅಸಮಾಧಾನಗೊಂಡ ಮಾಣಿಮರ್ಧುವಿನ ಜನತೆ ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲೂ ಪ್ರಸ್ತಾಪಿಸಿದ್ದು ಅವ್ಯವಹಾರಕ್ಕೆ ಕಾರಣಕರ್ತರಾದವರ ಹಾಗೂ ಅದಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net